ಮೊಬೈಲ್ ಟಾರಿಫ್ ದರ ಏರಿಕೆ  ವಿರೋಧಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.7; ಮೊಬೈಲ್ ಟಾರಿಫ್ ದರ ಏರಿಕೆ  ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ದಿನನಿತ್ಯದ ಅವಶ್ಯಕತೆಗಳಲ್ಲಿ ಸೇರಿಕೊಂಡಿರುವ ಮೊಬೈಲ್ ನಮ್ಮ ಹಲವಾರು ಕೆಲಸ ಕಾರ್ಯಗಳಿಗೆ ನೆರವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಎಲ್ಲಾ ಕಛೇರಿಗಳ ಕೆಲಸದಲ್ಲಿ, ಜನಗಳ ದೂರಸಂಪರ್ಕದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದು, ಮೊಬೈಲ್ ಬಳಸದವರಿಲ್ಲ ಎಂದು ಹೇಳಬಹುದು. ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಹಲವು ಖಾಸಗಿ ಕಂಪನಿಗಳು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ರೆಕ್ಕೆಯಿಲ್ಲದ ಹಕ್ಕಿಯಂತಾಗಿದೆ. ಖಾಸಗಿ ಕಂಪನಿಗಳ ಜೊತೆ ಸ್ಪರ್ಧಿಸಲಾಗದೆ ಸಾವಿನಂಚಿನಲ್ಲಿದೆ. ಇದು ಸರ್ಕಾರದ ಉದ್ದೇಶ ಪೂರಿತ ನಿಲುವಾಗಿದೆ ಎಂದರು. ಖಾಸಗಿ ಕಂಪನಿಗಳ ಅತ್ಯಧಿಕ ಲಾಭದ ಗಳಿಸುವ ಉದ್ದೇಶವು ದೇಶದ ಜನರ ಮೇಲೆ ಪರಿಣಾಮ ಬೀರಲಿದೆ. ಜನರು ಬಳಸುವ ಎಲ್ಲಾ ಅಗತ್ಯವಸ್ತುಗಳ ಬೆಲೆಗಳು, ಪೆಟ್ರೋಲ್-ಡೀಸಲ್ ಬೆಲೆಗಳು ಗಗನಕ್ಕೆ ಏರಿರುವಾಗ ಮೊಬೈಲ್ ಟಾರಿಫ್ ದರ ಏರಿಕೆಯು ಜನರಿಗೆ ಗಾಯದ ಮೇಲೆ ಬರೆ ಎಳೆದಂತಿದೆ. ಟ್ರಾಯ್ ಸಂಸ್ಥೆಯು ಹಲ್ಲು ಕಿತ್ತಿದ ಹಾವಂತಾಗಿದೆ. ಖಾಸಗಿ ಕಂಪನಿಗಳು ಏರಿಸುವ ದರದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಈ  ಟ್ರಾಯ್ ಖಾಸಗಿ ಕಂಪನಿಗಳ ಸಂಸ್ಥೆಗಳಂತೆ ಕೆಲಸ ಮಾಡುತ್ತಿದೆ. ಇಂತಹ ಜನವಿರೋಧಿ ನೀತಿಯನ್ನು ಎಐಡಿವೈಒ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರದ ಗಾಂಧಿ ವೃತ್ತದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಪರಶುರಾಮ್ ಖಾಸಗೀ ಕಂಪನಿಗಳ ಈ ಬೆಲೆ ಏರಿಕೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಭಿಷೇಕ್, ಅನಿಲ್ ಬಳ್ಳಾರಿ, ಗುರು, ಶಶಿ ಹಾಗೂ ವಿದ್ಯಾರ್ಥಿ- ಯುವಕರು ಪಾಲ್ಗೊಂಡಿದ್ದರು.