ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್
ಕಲಬುರಗಿ:ಜು.07: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ ಹಾಗೂ ನಾಡೋಜ ಡಾ.ಪಿ.ಎಸ್.ಶಂಕರ ಅವರು ಸಲಹೆ ಮಾಡಿದರು.
ಅವರಿಂದು ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆಯಲ್ಲಿ ಆರ್ಯ ವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತೃ ಸಂಘವು ಆಯೋಜಿಸಿದ ಉಚಿತ ಮೆಘಾ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ, ಡೆಂಗ್ಯು, ಮಲೇರಿಯಾ, ಚಿನ್ ಗುನ್ಯಾದಂತಹ ರೋಗವನ್ನು ಬರದಂತೆ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಡಾ.ಶಂಕರ್ ಕರೆ ನೀಡಿದರು.
ಪ್ರತಿಯೊಬ್ಬರು ರೋಗವನ್ನು ಬರದಂತೆ ನೋಡಿಕೊಳ್ಳುವುದರೊಂದಿಗೆ ಶುಚಿತ್ವ ಆಹಾರ ಸೇವನೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿದ್ದ, ಆರ್ಯ ವೈಶ್ಯ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮೈಲಾಪೂರ ಅವರು ಮಾತನಾಡುತ್ತ,ಗ್ರಾಮೀಣ ಪ್ರದೇಶದ ಹಾಗೂ ಪಟ್ಟಣದ ಜನತೆ ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು. ಸಂಘದ ಅಧ್ಯಕ್ಷ ಹಣಮಯ್ಯ ಬೇಲೂರೆಯವರು ಸರ್ವರನ್ನು ಸ್ವಾಗತಿಸಿದರು.
ವೇದಿಕೆಯ ಮೇಲೆ ಹಿರಿಯ ವೈದ್ಯ ಡಾ.ವಿದ್ಯಾಸಾಗರ ಇಟಗಂಪಲ್ಲಿ, ರಾಘವೇಂದ್ರ ಗುಪ್ತಾ, ಡಾ.ಪ್ರವೀಣಕುಮಾರ, ಡಾ.ಗುರುರಾಜ ಪ್ರಮೋದ, ಡಾ.ರೇಣುಕಾ ಪ್ರಸಾದ, ಡಾ.ರಾಹುಲ ಮಂದಕನಳ್ಳಿ, ಡಾ.ಕೋಠಾರಿ ಸೇರಿದಂತೆ ಅನೇಕರು ಭಾಗವಹಿಸಿ, ರೋಗಿಗಳಿಗೆ ಪರೀಕ್ಷಿಸಿ ವೈದ್ಯಕೀಯ ಔಷಧಗಳನ್ನು ಉಚಿತವಾಗಿ ನೀಡಿದರು.
ಕಾರ್ಯಕ್ರಮವನ್ನು ಶ್ರೀಮತಿ ಸಂಗೀತಾ ಶ್ರೀಧರ ಅವರು ನಿರೂಪಣೆ ಮಾಡಿದರು. ಕೊನೆಯಲ್ಲಿ ರಾಘವೇಂದ್ರ ಗುಪ್ತಾ ಅವರು ವಂದನಾರ್ಪಣೆ ಮಾಡಿದರು.
ಶಿಬಿರದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡು ಔಷಧಿಗಳನ್ನು ಪಡೆದುಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಹಣಮಯ್ಯ ಬೇಲೂರೆಯವರು ತಿಳಿಸಿದರು.