ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಶ್ರಮ ಅಗತ್ಯ
ಕಲಬುರಗಿ:ಜು.07: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. “ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ” ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳು ಮತ್ತು ಇಲಾಖೆಯ ಸದುಪಯೋಗವನ್ನು ಮಾಡಿಕೊಳ್ಳಬೇಕು. ಸಹಕಾರಿ ಚಳುವಳಿಯ ಯಶಸ್ವಿಗೆ ಇಲಾಖೆ, ಸಂಘಗಳ ಜೊತೆಗೆ ಜನರು ಶ್ರಮ ವಹಿಸಬೇಕಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ಸುಭಾಶ್ಚಂದ್ರ ಎಸ್.ಬರ್ಮಾ ಹೇಳಿದರು.
ನಗರದ ಮಿನಿ ವಿಧಾನಸೌಧದಲ್ಲಿರುವ ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಕಚೇರಿಯಲ್ಲಿ ‘ಸಹಕಾರ ಇಲಾಖೆ’, ‘ಜಯಾ ಹರಿಜನ-ಗಿರಿಜನ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ’, ‘ಸಿದ್ದಾರ್ಥ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪತ್ತಿನ ಸಹಕಾರ ಸಂಘ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳು ಸಂಯುಕ್ತವಾಗಿ ಭಾನುವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರದ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಹಾಯಕರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಜನರು ಸಕ್ರಿಯವಾಗಿ ಭಾಗವಹಿಸಬೇಕು. ಸದಸ್ಯರಾಗುವುದು, ಸಂಘಗಳ ರಚನೆ, ಸ್ವಯಂ ಉದ್ಯೋಗವನ್ನು ಮಾಡುವ ಮೂಲಕ ಸ್ವಂತ ಬೆಳವಣಿಗೆಗೆ ಜೊತೆ ಸಂಘ-ಸಂಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಸಹಕಾರಿ ಧುರೀಣ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ‘ಸಹಕಾರ’ ಎಂಬ ಶಬ್ದವೇ ಬಹಳ ಅದ್ಭುತವಾದದ್ದು. ಎಲ್ಲೆಡೆ ಸಹಕಾರವಿರಬೇಕು. ‘ವಸ್ತು ವಿನಿಯಮ ಪದ್ಧತಿ’ಯಿಂದ ‘ಹಣ ವಿನಿಮಯ ಪದ್ಧತಿ’ಯೆಡೆಗೆ ಜನಸಾಮಾನ್ಯರನ್ನು ಸೆಳೆದು, ಆರ್ಥಿಕ ಜ್ಞಾನವನ್ನುಂಟು ಮಾಡುವಲ್ಲಿ ಸಹಕಾರ ಚಳುವಳಿ ಪಾತ್ರವಹಿಸಿದೆ. ಸಹಕಾರಿ ಸಂಸ್ಥೆಗಳ ಪಾತ್ರದ ಬಗ್ಗೆ ವ್ಯಾಪಕವಾದ ಜನಜಾಗೃತಿಯಾಗಬೇಕಾಗಿದೆ. ಈ ಕೇತ್ರವನ್ನು ರಾಜಕೀಯ ಮುಕ್ತವಾಗಿ ಬೆಳೆಸಿದರೆ, ಇನ್ನೂ ಹೆಚ್ಚಿನ ಜನರಿಗೆ ಅನಕೂಲವಾಗಲು ಸಾಧ್ಯವಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಸಹಕಾರಿ ತತ್ವವು ವೈಯಕ್ತಿಕ ಸ್ವಾರ್ಥವನ್ನು ಬಿಟ್ಟಿ ಪರಸ್ಪರ ಬೆರೆಯುವುದುನ್ನು ಕಲಿಸುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಸ್ವಸಹಾಯ ಮತ್ತು ಪರಸ್ಪರ ಸಹಾಯದ ಗುಣವನ್ನು ಹೊಂದಿದೆ. ಸೇವೆಯೇ ಮುಖ್ಯ ಗುರಿಯಾಗಿದ್ದು, ಲಾಭ ಗಳಿಕೆ ಗೌಣವಾಗಿದೆ. ಅಗ್ಗದ ಸಾಲ ಸೌಲಭ್ಯ ದೊರೆಯುತ್ತದೆ. ಉಳಿತಾಯ ಹಾಗೂ ಹೂಡಿಕೆಗೆ ಉತ್ತೇಜನ ನೀಡುತ್ತದೆ. ಸಹಕಾರಿ ಸಂಘಗಳು ವಿಶೇಷವಾಗಿ ರೈತರು, ಜನಸಾಮಾನ್ಯರಿಗೆ ತುಂಬಾ ಪ್ರಯೋಜನೆಯಾಗಿವೆ. ಆದರೆ ರಾಜಕೀಯ ಹಸ್ತಕ್ಷೇಪ, ಬಂಡವಾಳದ ಕೊರತೆ, ಭ್ರಷಾಚಾರ, ತರಬೇತಿಯ ಅಭಾವ, ವಸೂಲಾಗದ ಸಾಲದ ಬಾಕಿ, ಸಹಕಾರಿ ತತ್ವದ ಅರಿವಿನ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಪರಿಹಾರದತ್ತ ಚಿತ್ತ ಹರಿಸಿ, ಸಹಕಾರಿ ಕ್ಷೇತ್ರ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ಅಶೋಕ ಕಂಟೆಗೋಳ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಪ್ರಾಂಶುಪಾಲೆ ಸುಮಿತ್ರಾ ಗಾಯಕವಾಡ, ಸಹಕಾರಿ ಕ್ಷೇತ್ರದ ಸಂಶೋಧನಾರ್ಥಿ ಮಾಲಾಶ್ರೀ ಎಸ್.ಭಜಂತ್ರಿ, ಶ್ವೇತಾ ಗಾಯಕವಾಡ ಸೇರಿದಂತೆ ಇನ್ನಿತರರಿದ್ದರು.