ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು
ಸಂಜೆವಾಣಿ ವಾರ್ತೆಚಿತ್ರದುರ್ಗ.ಜು.೭; ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು” ಎಂದು ಸಂಸ್ಕøತಿ ಚಿಂತಕರಾದ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ   ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ವತಿಯಿಂದ “ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಸಂಘಟಿತ ವಲಯದ ಸಂಶೋಧನೆಗಳು ಸಾಕಷ್ಟು ನಡೆಯುತ್ತಿದ್ದು, ಇದು ಸ್ವಾಗತಾರ್ಹ.  ಆದರೆ ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸಂಶೋಧನೆ ಸ್ಥಿತ್ಯಂತರ, ವಿಸ್ತರಣೆಗೊಳ್ಳಬೇಕಾಗಿದೆ. ಇದು ಹೊಸ ಸವಾಲು ಹಾಗೂ ಹೊಸ ಸಾಧ್ಯತೆಯೂ ಹೌದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಬರೀ ಹೂವು ನೋಡಿ ಬಹಳ ಸುಂದರವಾಗಿದೆ ಎಂದರೆ ಸಾಲದು, ತನ್ನ ಜೀವನವನ್ನೇ ತೇದು ಹೂವು ಮಾಡಿದ ಮೊಳಕೆಯನ್ನೂ ಜ್ಞಾಪಿಸಿಕೊಳ್ಳಬೇಕು. ಇದು ಮನುಷ್ಯನಿಗೆ ಇರುವ ಜವಾಬ್ದಾರಿ. ಹಾಗೆಯೇ ಸಂಶೋಧನೆಯು ಹಾಗೂ ಸಾಹಿತ್ಯ ಸೃಷ್ಠಿಯೂ ಸಹ ಹೂವುನಿಂದ ಮೊಳಕೆವರೆಗೂ ಬರಬೇಕಾಗಿದೆ ಎಂದರು.