ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೭; ಕೋವಿಡ್ ಸಾಂಕ್ರಮಿಕ ರೋಗ ಉಲ್ಬಣಗೊಂಡಿದ್ದ ಸಮಯದಲ್ಲಿ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಮಾದರಿಯಲ್ಲಿ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳು ಡೆಂಗ್ಯೂ ನಿಯಂತ್ರಣಕ್ಕೂ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ ಎಂದು  ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡೆಂಗ್ಯೂ ನಿಯಂತ್ರಣದ ಕುರಿತು ಜರುಗಿದ ಅಂತರ್ ಇಲಾಖೆ  ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆಂತಕದ ಸಂಗತಿಯಾಗಿದೆ. ನಗರ ಪ್ರದೇಶ ಹಾಗೂ ಗ್ರಾಮಗಳಲ್ಲಿ ಡೆಂಗ್ಯೂ ಕುರಿತು ಜನರಲ್ಲಿ ಅರಿವು ಮೂಡಿಸುವದರೊಂದಿಗೆ, ಜಾಗರೂಕತೆಯಿಂದ ಡೆಂಗ್ಯೂ ಪ್ರಕರಣಗಳನ್ನು ನಿರ್ವಹಿಸಬೇಕು. ಯಾವುದೇ ಜೀವ ಹಾನಿ ಉಂಟಾಗದಂತೆ ಚಿಕಿತ್ಸೆ ನೀಡಬೇಕು. ಸರ್ಕಾರದ ಆದೇಶದಂತೆ ಪ್ರತಿ ಶುಕ್ರವಾರ ಆಂದೋಲನದ ಮಾದರಿಯಲ್ಲಿ ಈಡಿಸ್ ಈಜಿಪ್ಟೈ ಸೊಳ್ಳೆಗಳ ಲಾರ್ವ ನಾಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹೆಚ್ಚಿನ ಪ್ರಕಣಗಳು ವರದಿಯಾದ ಸ್ಥಳಗಳಲ್ಲಿ ಮಂಗಳವಾರ ಹಾಗೂ ಶುಕ್ರವಾರ ಲಾರ್ವ ನಾಶದ ಕಾರ್ಯಕ್ರಮ ಕೈಗೊಳ್ಳಬೇಕು.  ಡೆಂಗ್ಯೂ ನಿಯಂತ್ರಣ ಕಾರ್ಯಗಳ ಮೇಲ್ವಿಚಾರಣೆಗಾಗಿ ಪ್ರತಿ ತಾಲ್ಲೂಕಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.