ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ
ದೇವರಹಿಪ್ಪರಗಿ:ಸೆ.27:ನಮ್ಮ ಬೇಡಿಕೆ ಈಡೆರುವವರೆಗೆ ಲೆಕ್ಕಣಿಗೆ ಬದಿಗಿಟ್ಟು ಮುಷ್ಕರ ಮುಂದುವರೆಸಲಾಗುವುದು ಎಂದು ಗ್ರಾಮಾಡಾಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಸಂಗಮೇಶ ಹೇಳಿದರು.
ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಗ್ರಾಮಾಡಾಳಿತ ಅಧಿಕಾರಿಗಳ ಸಂಘ ಕರೆ ಕೊಟ್ಟ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಬೆಂಬಲವಾಗಿ ಗುರುವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿ ತಾಲೂಕು ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ನಮ್ಮ ಕೆಲಸಕ್ಕೆ ತಕ್ಕಂತೆ ಸಮಾನ ವೇತನ ನೀಡದೆ ಕೇವಲ ಕೆಲಸ ತೆಗೆದುಕೊಳ್ಳುವುದರಲ್ಲಿ ನಿರತವಾಗಿದೆ.
ತಾಂತ್ರಿಕತೆ ಗೊತ್ತಿಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕ ಮಾಹಿತಿಗಳನ್ನು ಮಾಡುತ್ತಿದ್ದು, ಯಾವುದೇ ಸಂಭಾವನೆ ಇರುವುದಿಲ್ಲ. ಕೆಲಸಕ್ಕೆ ತಕ್ಕಂತೆ ಸಂಬಳವೂ ಇಲ್ಲದಾಗಿದ್ದು, ಹಲವಾರು ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆಯಿಟ್ಟರೂ ಪ್ರಯೋಜನವಾಗಿಲ್ಲ. ಸರಕಾರದ ಇಪ್ಪತ್ತಕ್ಕೂ ಹೆಚ್ಚು ಸೇವೆಗಳು ಗ್ರಾಮಾಡಳಿತದ ಮೂಲಕವೇ ಅನುಷ್ಠಾನಗೊಳ್ಳುತ್ತಿವೆ. ಆದರೂ ಸರಕಾರ ನಮ್ಮ ಮೇಲೆ ಕರುಣೆ ತೋರುತ್ತಿಲ್ಲ. ಅದಕ್ಕಾಗಿ ಇಂದು ಮೊಬೈಲ್ ಹಾಗೂ ಲೆಕ್ಕಣಿಕೆ ಸ್ಥಗಿತಗೊಳಿಸಿ ಅನಿರ್ದಿಷ್ಠವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಪ್ರಮುಖ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನದ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು. ಸುಸಜ್ಜಿತ ಕಚೇರಿ ಕಟ್ಟಡ, ಪೀಟೋಪಕರಣ, ಅಗತ್ಯ ಸಿಬ್ಬಂಧಿ ಒದಗಿಸಿಕೊಡಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಮುಷ್ಕರದಲ್ಲಿ ಗ್ರಾಮಾಡಳಿತ ಸಂಘದ ಪದಾಧಿಕಾರಿಗಳಾದ ಅನೀಲ ರಾಠೋಡ, ಬಸವರಾಜ ಹಂದ್ರಾಳ, ಪ್ರಕಾಶ ಬನ್ನೆಟ್ಟಿ, ಸದ್ದಾಮ ಮುಲ್ಲಾ, ಬಸಮ್ಮ ಬಾಟಿ, ಸಿದ್ದು ನಾಯ್ಕೋಡಿ, ರಾಮನಗೌಡ ರಾಂಪೂರ, ವಿಠ್ಠಲ ವಾಲೀಕಾರ, ಯಮುನಾ ಗಂಗಶೆಟ್ಟಿ, ಔದಲಸಿದ್ದ ಬಾಗೇವಾಡಿ ಸೇರಿದಂತೆ ಗ್ರಾಮಾಡಳಿತ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸಹಾಯಕರು ಪಾಲ್ಗೊಂಡಿದ್ದರು.