ಕನ್ನಡನಾಡಿಗೆ ವಚನಸಾಹಿತ್ಯ ವಿಶೇಷ ಮೆರಗು ನೀಡಿದೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ ಜು. 7: ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸಕ್ಕೆ ಹನ್ನೆರಡನೇ ಶತಮಾನದ ವಚನಸಾಹಿತ್ಯ ವಿಶೇಷ ಮೆರಗು ನೀಡಿದೆ ಎಂದು ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಎಂ.ಬಸವರಾಜು ಅವರು ಅಭಿಪ್ರಾಯಪಟ್ಟರು.ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ತಾಲ್ಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಶರಣಸಂಗಮದಲ್ಲಿ “ವಚನಗಳಲ್ಲಿ ಅನುಭಾವ” ವಿಷಯ ಕುರಿತು ಮಾತನಾಡುತ್ತ, ಶರಣರು ಜನರಾಡುವ ಭಾಷೆಯಲ್ಲಿ ವಚನ ಸಾಹಿತ್ಯವನ್ನು ನೀಡಿದ್ದಾರೆ. ಅವರ ಜೀವನ ಸಂಘರ್ಷದಿAದ ಅಂದರೆ ವೈಚಾರಿಕ ಕ್ರಾಂತಿಕಾರಿ ಚಿಂತನೆಗಳಿAದ ಕೂಡಿರುತ್ತಿತ್ತು. ಶರಣರು ಅನುದಿನವೂ ಅನುಭಾವಕ್ಕೆ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿ ಅವಕಾಶ ಮಾಡಿಕೊಡುತ್ತಿದ್ದರು. ಜೇಡರದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹದೇವಿ, ಆಯ್ದಕ್ಕಿ ಲಕ್ಕಮ್ಮ, ಮಡಿವಾಳ ಮಾಚಿದೇವ, ಅಮುಗೆ ರಾಯಮ್ಮ ಇನ್ನು ಮುಂತಾದವರ ವಚನಗಳಲ್ಲಿನ ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ವಿಶ್ಲೇಷಿಸಿದರು. ಶಿವಶರಣರ ಜೀವನ ನಮಗೊಂದು ಆದರ್ಶದ ಪಾಠ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಶರಣರು ತಲುಪುವ ಪ್ರಯತ್ನ ಮಾಡಿದ್ದು ಬಹುದೊಡ್ಡ ಆಂದೋಲನವೇ ಸರಿ. ಸಾಂಸ್ಕೃತಿಕ ನಾಯಕನಾಗಿರುವ ಬಸವಣ್ಣನವರು ಸರ್ವರನ್ನು ಒಳಗೊಳ್ಳುವ ಮಾನವೀಯ ಅಂತಃಕರಣ, ಹದುಳ ಮನಸ್ಸಿನ ಶ್ರೀಮಂತ ಹೃದಯ ವೈಶಾಲ್ಯವುಳ್ಳವರಾಗಿದ್ದುದರಿಂದ ಅವರೆಲ್ಲರೂ ನಮಗೀಗ ಶ್ರೇಷ್ಠ ವ್ಯಕ್ತಿಗಳೇ ಆಗಿದ್ದಾರೆಂದು ಹೇಳಿದರು.ಹಣ ಸಂಪಾದನೆ ಜತೆಗೆ ಅಧಿಕಾರ ಹಿಡಿಯುವ ತವಕದಲ್ಲಿರುತ್ತಾರೆ ಅನೇಕರು. ಆದರೆ ಮುಂಬೈ ವಿಧಾನಸಭೆಯ ಸದಸ್ಯರಾಗಿ, ಅನೇಕ ದೊಡ್ಡ ಹುದ್ದೆಯಲ್ಲಿದ್ದರೂ ಒಂದು ಸಂದರ್ಭದಲ್ಲಿ ವಚನ ಸಾಹಿತ್ಯ ಕಣ್ಣಿಗೆ ಬಿದ್ದ ತಕ್ಷಣ ತಮ್ಮ ಇಡೀ 60ವರ್ಷ ತಮ್ಮ ಸಾರ್ಥಕ ಬದುಕನ್ನು ವಚನ ಸಾಹಿತ್ಯದ ಹುಡುಕಾಟ, ಮುದ್ರಣ, ಅವುಗಳ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಮೀಸಲಿಡುವ ಮೂಲಕ ವಚನಸಾಹಿತ್ಯದ ಮರು ಓದಿಗೆ ಅವಕಾಶ ಕಲ್ಪಿಸಿದ ಫ.ಗು.ಹಳಕಟ್ಟಿ ಅವರ ಸೇವೆ ಅನನ್ಯ ಮತ್ತು ಅನುಪಮವಾದುದು ಎಂದು ನಿವೃತ್ತ ಉಪನ್ಯಾಸಕ ಜಿ.ಟಿ. ನಂದೀಶ್ ಅವರು ಫ.ಗು. ಹಳಕಟ್ಟಿ ಅವರ ಬದುಕು ಬರಹ ಕುರಿತ ಉಪನ್ಯಾಸ ನೀಡುತ್ತ ನುಡಿದರು.ಕೋಟಿ ಕೋಟಿ ವಚನಗಳನ್ನು ಸಂಗ್ರಹಿಸಿದ್ದರೂ ಕೆಲ ಮೂಲಭೂತವಾದಿಗಳು ಅವುಗಳನ್ನು ಇಲ್ಲವಾಗಿಸಿದರು. ಆದರೂ ಈಗ ಸಾವಿರಾರು ವಚನಗಳು ಅಧ್ಯಯನಕ್ಕೆ ಲಭ್ಯವಿವೆ. ಅದೆಲ್ಲವೂ ಹಳಕಟ್ಟಿ ಅವರ ಶ್ರಮದ ಫಲವೇ ಆಗಿದೆ. ಅವರು ಸ್ವಂತ ಬದುಕು, ಸಂಸಾರ, ಆಸ್ತಿ ಎಲ್ಲವನ್ನು ನಿರ್ಲಕ್ಷö್ಯ ಮಾಡಿ ವಚನ ಸಾಹಿತ್ಯದ ಉಳಿವಿಗೆ ಆದ್ಯತೆ ನೀಡಿದರು ಎಂದು ಹೇಳಿದರು.ನೇತೃತ್ವ ವಹಿಸಿದ್ದ ಶಿರಸಂಗಿ ಮಠದ ಬಸವಮಹಾಂತ ಸ್ವಾಮಿಗಳು ಮಾತನಾಡಿ, ರೈತರು ಭೂಮಿತಾಯಿಯ ಮಕ್ಕಳು. ಮಣ್ಣನ್ನು ನಂಬಿದವರು. ಯಾರೇ ಆಗಲಿ ಕೃಷಿಕರ ಹಿತವನ್ನು ಕಡೆಗಣಿಸಬಾರದು. ಅವರನ್ನು ಪ್ರೋತ್ಸಾಹಿಸಿದಾಗ ಮಾತ್ರ ಸುಭಿಕ್ಷವಾಗಿರಲು ಸಾಧ್ಯ. ಇಂತಹ ಧರ್ಮದ ತಿಳುವಳಿಕೆ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಬೇಕು. ಧರ್ಮ ಅಂದರೆ ಅದಕ್ಕೇನು ದೊಡ್ಡ ವ್ಯಾಖ್ಯಾನ ಇಲ್ಲ. ಸ್ವಾಮಿ ವಿವೇಕಾನಂದರು ಹೇಳುವಂತೆ ಒಳ್ಳೆಯವನಾಗಿರು, ಒಳ್ಳೆಯದನ್ನು ಮಾಡು ಅದುವೇ ಧರ್ಮ. ಈಗ ನಾವು ನವನಾಗರೀಕತೆಯವರಾಗಿ ಸಂಸ್ಕಾರದ ಕಡೆಗೆ ಅಷ್ಟಾಗಿ ಗಮನಕೊಡದ ಕಾರಣ ನಮ್ಮ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಅಧ್ಯಯನದಲ್ಲಿ ಆಸಕ್ತಿ ತೋರದೆ ಬರೀ ಮೊಬೈಲ್ ಗೀಳಿನಲ್ಲಿ ಕಾಲ ಕಳೆಯುತ್ತಿರುವುದು ಆತಂಕಕಾರಿ ವಿಷಯ ಎಂದು ವಿಷಾದ ವ್ಯಕ್ತಪಡಿಸಿದರು.