ರಾಜಕೀಯ ದುರುದ್ದೇಶದಿಂದ ಮುಡಾ ಹಗರಣ ಸೃಷ್ಟಿ; ಡಿ.ಬಸವರಾಜ್ ಆರೋಪ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೭; ಮೂಡಾ ಹಗರಣ ಹೊರಬರುವಲ್ಲಿ ಡಿಸಿಎಂ ಶಿವಕುಮಾರ್ ಕೈವಾಡವಿದೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪ ಕೇವಲ ಹಿಟ್ & ರನ್ ಆರೋಪ ಅಷ್ಟೇ, ಮೂಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸಿಡಿ ಫ್ಯಾಕ್ಟರಿ ನಂತರ ಈಗ ಮೂಡಾ ಫ್ಯಾಕ್ಟರಿ ಹೊರಬರುತ್ತಿದೆ ಕುಮಾರಸ್ವಾಮಿಯವರುಹಿಟ್ & ರನ್ ಆರೋಪ ಮಾಡುವುದರಲ್ಲಿ ಇಡೀ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.ಅವರು ತಮ್ಮ ರಾಜಕೀಯ ಜೀವನದಲ್ಲಿ ಈ ವರೆಗೆ ಮಾಡಿರುವ ಯಾವುದೇ ಒಂದು ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರಾ ಎಂದು ಅವರು ಪ್ರಶ್ನಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪತ್ನಿಗೆ ತವರು ಮನೆಯಿಂದ ಉಡುಗೊರೆಯಾಗಿ ಬಂದಂತಹ 3 ಎಕರೆ 16 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅದಕ್ಕೆ ಬದಲಾಗಿ ನಿವೇಶನ ಕೊಟ್ಟಿದ್ದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು. 2021 ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಬಿಜೆಪಿ ಸರ್ಕಾರವೇ 50:50 ನಿಯಮ ಮಾಡಿ, ಬಿಜೆಪಿ ಸರ್ಕಾರವೇ ಬದಲಿ ನಿವೇಶನ ಕೊಟ್ಟು, ಈಗ ಅಕ್ರಮ ಆಗಿದೆ ಎನ್ನುತ್ತಿದ್ದಾರೆಂದು ಆರೋಪಿಸಿದರು.ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು  ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ. ಬಿಜೆಪಿಯವರಿಗೆ ಆಡಳಿತಾತ್ಮಕವಾಗಿ ವಿರೋದಿಸುವ ಬೇರೇನೂ ವಿಷಯವಿಲ್ಲ. ಯತ್ನಾಳರವರು ಹೇಳಿದಂತೆಆರ್.ಎಸ್.ಎಸ್ ಮತ್ತು ಬಿಜೆಪಿ ಹೈಕಮಾಂಡ್ ಅನ್ನು ತೃಪ್ತಿ ಪಡಿಸಲು ಈ ರೀತಿಯ ನಾಟಕ ಮಾಡುತ್ತಿದ್ದಾರೆ. ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಕಾಲದಲ್ಲಿ, ಇನ್ನು ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಮೂಡದವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆಪರ್ಯಾಯವಾಗಿ 50:50 ಅನುಪಾತದಲ್ಲಿ ನಿವೇಶನ ಕೊಡಲು50:50 ನಿಯಮವನ್ನು  ಬಿಜೆಪಿಯವರೇ ಮಾಡಿ, ಯಾರ ಯಾರ ಜಮೀನು ವಶಪಡಿಸಿಕೊಂಡಿದ್ದಾರೋ ಅವರಿಗೆಲ್ಲರಿಗೂ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ.ಅದಕ್ಕೆ ಸಿದ್ದರಾಮಯ್ಯ ರವರ ಕುಟುಂಬ ಸಹ ಒಪ್ಪಿದೆ. ಹಾಗೆಯೇ ಇಂಥಾ ಕಡೆಯೇ ಬದಲಿ ನಿವೇಶನ ಕೊಡಿ ಎಂದು ಅವರು ಕೇಳಿಲ್ಲ. ಸಿ.ಎಂ ಸಿದ್ದರಾಮಯ್ಯರವರ ಪತ್ನಿಯವರು ಕಳೆದುಕೊಂಡಿದ್ದ ಜಮೀನಿಗೆ ಕಾನೂನುಬದ್ಧವಾಗಿ ಮೂಡಾ ಬೇರೆ ಕಡೆ ಭೂಮಿ ನೀಡಿದೆ ಆದರೂ ಬಿಜೆಪಿಯವರು ಪ್ರಚಾರದಾಸೆಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.ಹಾಗೆಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದ ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿಟ್ಟು,  ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಆಗ ನಿವೇಶನ ಹಂಚಿಕೆ ಮಾಡಿದ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಹಿರಿಯ ಐಎಎಸ್‌ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತಿದೆ. ತನಿಖೆ ಮುಗಿದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ.ಹಿಂದೆ ನಿವೇಶನ ಹಂಚಿದವರು ಬಿಜೆಪಿಯವರೇ ಆಗಿರುವುದರಿಂದ ಈಗವರು  ರಾಜೀನಾಮೆ ಕೇಳುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಒಟ್ಟಾರೆ ಹೇಳುವುದಾದರೆ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳಿಂದ ಜನ ಸಂತಸ ವ್ಯಕ್ತಪಡಿಸುತ್ತಿದ್ದು, ಇದನ್ನು ಜೀರ್ಣಿಸಿಕೊಳ್ಳಲಾಗದೆ ತಮ್ಮಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಕಪ್ಪು ಮಚ್ಚೆ ಬಾರದ ರೀತಿ ನಡೆದುಕೊಂಡಿರುವ ನಮ್ಮಮುಖ್ಯಮಂತ್ರಿಗಳ ಮೇಲೆ ಈ ರೀತಿಯ ಸುಳ್ಳು ಆರೋಪಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿ.ಹೆಚ್ ಉದಯಕುಮಾರ್, ಲಿಯಾಖತ್ ಅಲಿ,ಡಿ.ಶಿವಕುಮಾರ್ ಮತ್ತಿತರರಿದ್ದರು.