ಹರಪನಹಳ್ಳಿ: ಜಿಲ್ಲಾಧಿಕಾರಿಗಳಿಂದ ಜನಸ್ಪಂದನ ಕಾರ್ಯಕ್ರಮ
ಹೊಸಪೇಟೆ (ವಿಜಯನಗರ ಜಿಲ್ಲೆ) ಜು,07: ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಜುಲೈ 6ರಂದು ವಿಜಯನಗರ ಜಿಲ್ಲೆಯ ಗಡಿ ತಾಲೂಕು ಹರಪನಹಳ್ಳಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು.
ಹರಪನಹಳ್ಳಿಯ ಡಾ.ಬಾಬು ಜಗಜೀವನರಾಮ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಹವಾಲು ಸಲ್ಲಿಸಿದ್ದು ವಿಶೇಷವಾಗಿತ್ತು. ರೈತ, ಕಾರ್ಮಿಕ, ಕೃಷಿ ಕೂಲಿಕಾರ್ಮಿಕ ಸಂಘಟನೆಗಳ ಮುಖಂಡರು ಸಹ ಆಗಮಿಸಿ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯಿ ಮೊಹಮ್ಮದ್ ಅಲಿ ಅಕ್ರಮ ಶಾ, ಹರಪನಹಳ್ಳಿ ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು.
ಹಳ್ಳಿಕೇರಿ, ಮಾದಿಹಳ್ಳಿ, ಗೌರಿಪುರ ತೊಗರಿಕಟ್ಟಿ, ಜಿಟ್ಟಿನಕಟ್ಟಿ, ಯರಬಾಳು, ತಾವರಗೊಂದಿ, ಅರಸನಾಳು, ಹಲುವಾಗಲು, ಗರ್ಭಗುಡಿ, ಬಿಕ್ಕಿಕಟ್ಟಿ ಗ್ರಾಮದಲ್ಲಿನ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಿವೇಶನಕ್ಕೆ ಸರ್ಕಾರಿ ಜಮೀನು ಹುಡುಕಿಕೊಡಬೇಕು. ಜಾಗವಿರುವ ಕಡೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಯಾ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಭಾಗ್ಯ, ಶ್ರುತಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಅರಸಿಕೇರೆಯಲ್ಲಿ ನಾಡಕಚೇರಿ ನಿರ್ಮಿಸಬೇಕು. ಬಸ್ ಸೌಕರ್ಯ ಕಲ್ಪಿಸಬೇಕು. ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ನಿರಂತರ ಜ್ಯೋತಿ ಸಮಸ್ಯೆ ಸರಿಪಡಿಸಬೇಕು ಎಂದು ಅರಸಿಕೆರೆ ಗ್ರಾಮದ ರೈತ ಮುಖಂಡರಾದ ಹೆಚ್ ಹಾಲಪ್ಪ, ಎ.ಬಿ.ನಾಗರಾಜಗೌಡ ಅವರು ಗ್ರಾಮಸ್ಥರೊಂದಿಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.
ಚಿಗಟೇರಿ ಮಹಿಳಾ ಸರ್ಕಾರಿ ಪಿಯು ಕಾಲೇಜ್ ಬಳಿ ಗಾಜಿನ ಬಾಟಲಿ ಬೀಸಾಕಿ ಹೋಗುವಷ್ಟು ಕೆಟ್ಟು ಹೋಗಿರುವ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಭೂದಾನಿಗಳು ಮತ್ತು ಸಮಾಜಸೇವಕರಾದ ಹುಳ್ಳಿ ಕೊಟ್ರಪ್ಪ ಹಾಗೂ ಇನ್ನೀತರ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸ್ಥಳ ಪರಿಶೀಲನೆ ನಡೆಸಿ ಸರಿಪಡಿಸಲು ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾವು ಹಿರಿಯ ರಂಗಭೂಮಿ ಕಲಾವಿದರಾಗಿದ್ದು ತಮಗೆ ವಯಸ್ಸಾಗಿದ್ದು ಮನೆ ಕಟ್ಟಿಸಲು ಧನಸಹಾಯ ನೀಡಬೇಕು ಎಂದು ಇದೆ ವೇಳೆ ಹಿರಿಯ ಕಲಾವಿದರಾದ ಡಾ.ಹೆಚ್. ಷಡಕ್ಷರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅರ್ಜಿ ಸಲ್ಲಿಕೆ ವಿವರ: ಕಂದಾಯ ಇಲಾಖೆಗೆ ಅತಿ ಹೆಚ್ಚು 87, ತಾಲೂಕು ಪಂಚಾಯತ್‌ಗೆ 19, ಪುರಸಭೆಗೆ 8, ಕೃಷಿಗೆ ಇಲಾಖೆಗೆ 6, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತಲಾ 4, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸ್ಕಾಂಗೆ ತಲಾ 3., ಅಬಕಾರಿ ಇಲಾಖೆ, ವಾರ್ತಾ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ತಲಾ 2, ಪಂಚಾಯತ್ ರಾಜ್ಯ ಎಂಜಿನಿಯರಿAಗ್ ಇಲಾಖೆ ಮತ್ತು ಕೆಆರ್‌ಐಡಿಎಲ್ ಇಲಾಖೆಗೆ ತಲಾ 1 ಅರ್ಜಿಗಳು ಸೇರಿ ಒಟ್ಟು 142 ಅರ್ಜಿಗಳು ಸ್ವೀಕೃತವಾದವು.
ಹಿಂಬರಹ ಕೊಡಿ: ಯಾವುದೇ ಅರ್ಜಿಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಕಾನೂನಿನಲ್ಲಿ ಅವಕಾಶವಿದ್ದರೆ ಕೂಡಲೇ ಅರ್ಜಿ ಪರಿಶೀಲಿಸಿ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ವಿಳಂಬ ಮಾಡದೇ ಹಿಂಬರಹ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸೌಜನ್ಯದಿಂದ ವರ್ತಿಸಿ: ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ವೇಳೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಿ ಸ್ಪಂದನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅರ್ಜಿ ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ: ಕಾರ್ಯಕ್ರಮದ ಸ್ಥಳದಲ್ಲಿ ವಿವಿಧ ಇಲಾಖೆಗಳಿಂದ ಸಾಲಾಗಿ ಮಳಿಗೆ ಹಾಕಿ ಅರ್ಜಿ ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
ಮಾಹಿತಿ ಫಲಕ: ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳ ಮಾಹಿತಿ ಫಲಕಗಳನ್ನು ಸ್ಟಾಲನಲ್ಲಿ ಅಳವಡಿಸಿ, ಕರಪತ್ರ ವಿತರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಗಿರೀಶಬಾಬು, ತಾಪಂ ಇಓ ಚಂದ್ರಶೇಖರ, ಡಿವೈಎಸ್ಪಿ ಮಹಾಂತೇಶ ಸಜ್ಜನ, ಪಿಎಸ್‌ಐ ಶಂಭುಲಿAಗ್ ಹಿರೇಮಠ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ, ಸಿಡಿಪಿಓ ಜಿ ಅವಿನಾಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿಗಳಿಂದ ನಗರ ಸಂಚಾರ: ಜನಸ್ಪಂದನ ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾಧಿಕಾರಿಗಳು ಹರಪನಹಳ್ಳಿ ನಗರ ಸಂಚಾರ ನಡೆಸಿದರು. ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಗಿರೀಶಬಾಬು, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಎರಗುಡೆ ಅವರೊಂದಗೆ ಜಿಲ್ಲಾಧಿಕಾರಿಗಳು ಸೈಕಲ್ ಸವಾರಿ ನಡೆಸಿದರು. ಎಪಿಎಂಸಿಯಿAದ ಸೈಕಲ್ ಮೇಲೆ ಹೊರಟು ಕೊಟ್ಟೂರ ಸರ್ಕಲ್, ಬಳಿಕ ಕೆಂಪಯ್ಯನಮಠ ಹತ್ತಿರ ಸಂಚರಿಸಿ ಶುಚಿತ್ವ ಕಾಯ್ದುಕೊಳ್ಳಲು ಜನತೆಗೆ ತಿಳಿಸಿದರು. ಬಳಿಕ ಟಿಎಂಎಇ ಸೊಸೈಟಿಯ ಶಾಲೆಗೆ ಭೇಟಿ ನೀಡಿ ವಿದ್ಯಾಭ್ಯಾಸದ ಬಗ್ಗೆ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಬಳಿಕ ಮಹೇಶ ಆಸ್ಪತ್ರೆಗೆ ತೆರಳಿ ಅಲ್ಲಿನ ಸ್ಕ್ಯಾನಿಂಗ್ ಯಂತ್ರ, ಚಿಕಿತ್ಸಾ ದರದ ಬಗ್ಗೆ ಪರಿಶೀಲಿಸಿದರು. ಡೆಂಗೆ ಜ್ವರ ಪರೀಕ್ಷೆಗೆ ಶುಲ್ಕ ಪಡೆಯುವಾಗ ಸರ್ಕಾರ ನಿಗದಿಪಡಿಸಿದ ನಿಯಮ ಪಾಲಿಸಲು ತಿಳಿಸಿದರು. ತೆಗ್ಗಿನಮಠ ವೃತ್ತದಲ್ಲಿ ಚರಂಡಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಆಯುಷ್ ಕಣ್ಣಿನ ಆಸ್ಪತ್ರೆಗೆ ತೆರಳಿದ ವೇಳೆ ಅಲ್ಲಿ ಪಡೆಯುತ್ತಿದ್ದ ಚಿಕಿತ್ಸೆಯ ದರ ಪರಿಶೀಲನೆ ನಡೆಸಿದರು. ಸಿಪಿಐ ಕಚೇರಿಯ ಗ್ರಂಥಾಲಯ ಇಲಾಖೆಯ ಪ್ರದೇಶದ ಸುತ್ತಲು ವೀಕ್ಷಣೆ ನಡೆಸಿದರು. ಕಾರ್ ನಿಲ್ದಾಣದಲ್ಲಿ ಡ್ರೈವರಗಳ ಮನವಿ ಸ್ವೀಕರಿಸಿದರು. ಬಳಿಕ ಬಸ್ ನಿಲ್ದಾಣದ ಸುತ್ತಲು ಸಂಚರಿಸಿ ಸುತ್ತಲಿನ ಪರಿಸರ ಪರಿಶೀಲಿಸಿದರು. ಬಸ್ ನಿಲ್ದಾಣದ ಹತ್ತಿರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ತರಕಾರಿ ಮಾರುಕಟ್ಟೆಯ ವೀಕ್ಷಣೆ ನಡೆಸಿದರು. ಜ್ಯೂನಿಯರ್ ಕಾಲೇಜ್ ಬಳಿಕ ಕನಕ ವೃತ್ತಕ್ಕೆ ಆಗಮಿಸಿ ಅಲ್ಲಿನ ಚರಂಡಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಅಲ್ಲಿಂದ ಗುಡೇಕಟ್ಟೆ ಸರ್ಕಲ್ ಹಾಗೂ ಐಬಿ ಸರ್ಕಲನಲ್ಲಿ ಸಂಚರಿಸಿ ಬಳಿಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.