ಅಕ್ಕಿ ವಿಷಯದಲ್ಲಿ ಸಿಎಂ ಕ್ಷುಲ್ಲಕ ರಾಜಕಾರಣ
ಹುಬ್ಬಳ್ಳಿ, ಜು 7: ಅಕ್ಕಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಕೇಂದ್ರ ಅಕ್ಕಿ ಪೂರೈಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಾವೀಗ ಅಕ್ಕಿ ಕೊಡುತ್ತೇವೆಂದರೂ ಖರೀದಿಸಲು ಸಿದ್ದರಾಮಯ್ಯ ಬಳಿ ದುಡ್ಡಿಲ್ಲ ಎಂದು ಕುಟುಕಿದರು.
ಕಳೆದ ಬಾರಿ ನಮ್ಮ ಬಳಿ ಅಕ್ಕಿ ಸಂಗ್ರಹ ಇರಲಿಲ್ಲ. ಆದ್ದರಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಕೊಡುವುದು ನಿಲ್ಲಿಸಿದ್ದೆವು. ಈಗ 330 ಲಕ್ಷ ಟನ್ ಅಕ್ಕಿ ಲಭ್ಯವಿದೆ. ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶ ನೀಡಿದ್ದೇವೆ. ಅಕ್ಕಿ ದರ ಕೆ.ಜಿ.ಗೆ 34 ರಿಂದ 28 ರೂ.ಗೆ ಇಳಿಸಿದ್ದೇವೆ. ಯಾವುದೇ ರಾಜ್ಯ ಸರ್ಕಾರಗಳು ಖರೀದಿಸಬಹುದು ಎಂದ ಅವರು, ಎಷ್ಟು ಬೇಕಾದರೂ ಅಕ್ಕಿ ಖರೀದಿಸಿ ಎಂದರೂ ಸಹ ಸಿದ್ದರಾಮಯ್ಯ ಅವರು ಸದ್ಯ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರ ಬಳಿ ಅಕ್ಕಿ ಖರೀದಿಗೆ ಹಣ ಇಲ್ಲ ಎಂದು ನುಡಿದರು.
ಗೃಹಲಕ್ಷ್ಮೀ ಹಣ ಎರೆಡು ತಿಂಗಳಿಂದ ಕೊಟ್ಟಿಲ್ಲ. ಪೆಟ್ರೋಲ್ ಹಾಗೂ ಹಾಲಿನ ದರ ಏರಿಸಲಾಗಿದೆ. ರೈತರಿಗೆ ಕೊಡುತ್ತಿರುವ ಸಬ್ಸಿಡಿ ಹಣ ಕಡಿತ ಮಾಡಿ ರೈತರಿಗೆ ದ್ರೋಹ ಮಾಡಲಾಗಿದೆ ಎಂದ ಅವರು, ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡುತ್ತಿಲ್ಲ. ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಖಂಡಿಸಿದರು.
ಮಹದಾಯಿ ಯೋಜನೆ ನೀರನ್ನು ಈಗಾಗಲೇ ಮೂರು ರಾಜ್ಯಗಳಿಗೆ ನಿಗದಿಗೊಳಿಸಲಾಗಿದೆ ಎಂದ ಅವರು ಸದ್ಯ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿದೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.