ಹಾರಕೂಡ ಶ್ರಿ ಮಠದಿಂದ ಬಸವ ಭಾನು ಪ್ರಶಸ್ತಿ ಪ್ರದಾನ ಅನುಭವ ಮಂಟಪ ಬಸವಾದಿ ಶರಣರು ಕೊಟ್ಟ ಅನರ್ಘ್ಯ ಕಾಣಿಕೆ : ಗೊರುಚ
ಬೀದರ್:ಜು.7: ಅನುಭವ ಮಂಟಪ ಒಂದು ಕಟ್ಟಡವಲ್ಲ ಅದು ಕ್ರಿಯಾಶೀಲತೆಯಿಂದ ಕೂಡಿದ ಚಿಂತನಾಸೌಧವಾಗಿದ್ದು ಬಸವಾದಿ ಶರಣರು ಕೊಟ್ಟ ಅನರ್ಘ್ಯ ಕಾಣಿಕವಾಗಿದೆ ಎಂದು ನಾಡೋಜ ಗೊರುಚ ಅವರು ನುಡಿದರು.
ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ರಾಜ್ಯಮಟ್ಟದ ಬಸವ ಭಾನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೊ. ರು. ಚನ್ನಬಸಪ್ಪನವರು ಸಮಾಜದ ಸ್ತರ ವಿನ್ಯಾಸ ಅಳಸಿ, ಅಂತರಂಗ ಬಹಿರಂಗ ಶುದ್ದಿಗೊಳಿಸಿ ಸಾತ್ವಿಕ ಸಮ ಸಮಾಜದ ನಿರ್ಮಾಣಕ್ಕೆ ಭದ್ರ ತಳಪಾಯ ರೂಪಿಸಿದ ಜಗತ್ತಿನ ಇತಿಹಾಸದ ಏಕೈಕ ಶ್ರೇಷ್ಠ ಪರಿಕಲ್ಪನೆ ಎಂದರೆ ಅನುಭವ ಮಂಟಪವಾಗಿದೆ.
ಕಾಲ ಪುರುಷನಿಗೂ ವಾಸ್ತವದ ಅರಿವು ಮೂಡಿಸುವ ಗರಡಿ ಮನೆ ಇದಾಗಿದೆ, ಇಂತಹ ಸಾಮಾಜಿಕ ಕ್ರಾಂತಿ ಭೂಮಿ ಬಸವ ನೆಲದಲ್ಲಿರುವ ಹಾರಕೂಡ ಶ್ರಿ ಮಠದ ಸಮನ್ವಯ ಕಾರ್ಯ ವೈಖರಿ ಶ್ಲಾಘನೀಯ, ಡಾ. ಚನ್ನವೀರ ಶಿವಾಚಾರ್ಯರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಣನೀಯ, ವಿಷಯ ವಚನ ಕುರಿತಾದ 15 ಸಂಪುಟಗಳ ಮುದ್ರಣ ಶ್ರೀಮಠದ ಶ್ರೇಷ್ಠ ಬಸವ ಕಾರ್ಯಕ್ಕೆ ನಿದರ್ಶನವಾಗಿದೆ, ಎನಗಿಂತ ಕಿರಿಯರಿಲ್ಲ ಸಾಧಕರಿಗಿಂತ ಹಿರಿಯರಿಲ್ಲ ಎನ್ನುವ ಭಾವದಲ್ಲಿ ನಾನು ಸ್ವೀಕರಿಸಿರುವ ಬಸವ ಭಾನು ಪ್ರಶಸ್ತಿ ಅತ್ಯಂತ ಮೌಲಿಕ ಹಾಗೂ ಪಾವಿತ್ರ್ಯತೆಯಿಂದ ಕೂಡಿದ್ದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಬೀರ ದಾಸರ ಮಾತು ಉಲ್ಲೇಖಿಸುತ್ತಾ ದಾರ್ಶನಿಕರ ಅದ್ಭುತ ನುಡಿಗಳನ್ನು ಜೋಳಿಗೆಯಲ್ಲಿ ತುಂಬಿಕೊಂಡು ನಡೆದರೆ, ಬದುಕಿನ ನಿಜ ಭವ್ಯತೆ ಮತ್ತು ಸಾರ್ಥಕತೆ ಲಭಿಸುತ್ತದೆ ಎಂದು ಹೇಳಿದರು.
ನೂತನ ಅನುಭವ ಮಂಟಪದ ಸಮಗ್ರ ಚಿತ್ರಣ ಬಿಚ್ಚಿಡುವುದರೊಂದಿಗೆ ಸಮಕಾಲಿನ ಸವಾಲುಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ನೂತನ ಅನುಭವ ಮಂಟಪ ಮೇಲುಸ್ತರದ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.
” ಕನ್ನಡ ನಾಡು ಕಂಡ ಅಪರೂಪದ ವಿದ್ವಾಂಸರಲ್ಲೊಬ್ಬರಾದ ಗೊ. ರು. ಚನ್ನಬಸಪ್ಪನವರು ಕನ್ನಡ ಸಾಹಿತ್ಯಕ್ಕೆ, ವಚನ ಸಾಹಿತ್ಯಕ್ಕೆ ಮಾಡಿರುವ ಸೇವೆ ಅನುಪಮ, ಅನುಕರಣೆಯ. ಸರ್ವ ರೀತಿಯ ಶುಭ್ರ ವ್ಯಕ್ತಿತ್ವದ ಮಾನವತಾವಾದಿ ಗೊ.ರು.ಚ.ರವರು ಇಳಿ ವಯಸ್ಸಿನಲ್ಲಿಯೂ ಬತ್ತದ ಚಿಲುಮೆಯಾಗಿ ನಾಡಿನ ಸೇವೆ ಸಲ್ಲಿಸುತ್ತಿರುವುದು ಅಮರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ
ಡಾ.ಚನ್ನವೀರಶಿವಾಚಾರ್ಯರು, ಸಂಸ್ಥಾನ ಹಿರೇಮಠ ಸುಕ್ಷೇತ್ರ ಹಾರಕೂಡ.
ನೇತೃತ್ವ ವಹಿಸಿದ ಭಾಲ್ಕಿ ಗುರುಬಸವ ಪಟ್ಟ ದೇವರು ಮಾತನಾಡಿದರು.
ಹಾರಕೂಡ ಶ್ರೀಮಠದ ವತಿಯಿಂದ ಶನಿವಾರ ಸಾಯಂಕಾಲ
ನಾಡಿನ ಹಿರಿಯ ಸಾಹಿತಿ ನಾಡೋಜ ಗೊ.ರು. ಚನ್ನಬಸಪ್ಪನವರಿಗೆ ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು 1ಲಕ್ಷ ರೂಪಾಯಿ ನಗದು ಪ್ರಶಸ್ತಿ ಫಲಕದೊಂದಿಗೆ “ಬಸವ ಭಾನು” ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಮುಖಂಡರಾದ ಮೇಘರಾಜನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಬಿ.ಕೆ ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ವಿಜಯಕುಮಾರ ಸಂಗೋಳಗೆ, ಸೂರ್ಯಕಾಂತ ಸಂಗೋಳಗಿ, ನವಲಿಂಗ ಪಾಟೀಲ, ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.
ನವಲಿಂಗ ಪಾಟೀಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ವಚನ ಗಾಯನ ನಡೆಸಿಕೊಟ್ಟರು.
ಮಲ್ಲಿನಾಥ ಹಿರೇಮಠ ಹಾರಕೂಡ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀಮಠಕ್ಕೆ ಆಗಮಿಸಿದ ಗುರುಚ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.