ರೈಲ್ವೆ ಗೇಟ್ ಪದೇ ಪದೇ ಬಂದ್ ಸಂಚಾರಕ್ಕೆ ತೊಂದರೆ ಸಾರ್ವಜನಿಕರು ಅಕ್ರೋಶ
ಉಮಾಪತಿ ಶೆಟ್ಟರ್
 ಹಗರಿಬೊಮ್ಮನಹಳ್ಳಿ. ಜು.07 ರೈಲು ಓಡಾಟದಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ದಿನ ಬೆಳಗಾದರೂ ರೈಲ್ವೆ ಗೇಟ್ ಬಳಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತದೆ. ಇದರಿಂದ ಸಾರ್ವಜನಿಕರು ರೈಲ್ವೆ ಇಲಾಖೆಗೆ ಇಡೀ ಶಾಪ ಹಾಕುತ್ತಿದ್ದಾರೆ. ಪಟ್ಟಣದ ಮಧ್ಯೆ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ಹೊಸಪೇಟೆ ಹರಿಹರ ಮುಖ್ಯರಸ್ತೆ  ಬರುತ್ತದೆ. ಅಲ್ಲಿಯೇ ರೈಲ್ವೆ ಗೇಟ್ ಇದೆ. ರೈಲು ಬರುವ ಸಂದರ್ಭದಲ್ಲೇ ಗೇಟ್ ಹಾಕಿದರೆ ಸುಮಾರು 30 ರಿಂದ 60 ನಿಮಿಷ ಟ್ರಾಫಿಕ್ ಜಾಮ್ ಆಗುತ್ತದೆ. ಇಲ್ಲಿ ಪ್ಯಾಸೆಂಜರ್ ರೈಲಿಗಿಂತ ಗೂಡ್ಸ್ ರೈಲುಗಳು ಹೆಚ್ಚು ಓಡಾಡುವುದರಿಂದ ದಿನಕ್ಕೆ 10 ರಿಂದ 11 ಬಾರಿ ಗೇಟ್ ಹಾಕಲಾಗುತ್ತದೆ . ಇದೇ ರೀತಿ  ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ.
  ಬ್ರಿಟಿಷರ ಕಾಲದಲ್ಲಿ ಹೊಸಪೇಟೆಯಿಂದ ಕೊಟ್ಟೂರಿಗೆ ಉಗಿಬಂಡಿ ರೈಲು ಮಾರ್ಗ  ಹಾಕಲಾಗಿತ್ತು. ಸುಮಾರು ವರ್ಷಗಳ ನಂತರ ರೈಲು ಓಡಾಡುವುದು ನಿಲುಗಡೆಯಾಯಿತು. ಹೊಸಪೇಟೆಯಿಂದ ಹರಿಹರ ರೈಲು ಮಾರ್ಗ ಮಾಡಲು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರು. ಕೇಂದ್ರ ಸರ್ಕಾರ ಕೊನೆಗೂ ಹೊಸಪೇಟೆಯಿಂದ ಹರಿಹರ ವರೆಗೆ ರೈಲು ಮಾರ್ಗ ಸಂಪರ್ಕ ಕಲ್ಪಿಸಿದರು.
ಈ ಭಾಗದ ಬಹು ದಿನಗಳ  ಹೋರಾಟದ ಕನಸು ಈಡೇರಿದ್ದಕ್ಕೆ ರೈಲ್ವೆ ಹೋರಾಟ ಸಮಿತಿಯವರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದರು.  ಸಾಕಷ್ಟು ರೈಲುಗಳು ಈ ಮಾರ್ಗದಲ್ಲಿ ಓಡಾಡುತ್ತಿವೆ. ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಎಂದು ಕನಸು ಕಾಣುವಾಗಲೇ ಒಂದೇ ಒಂದು ಪ್ಯಾಸೆಂಜರ್ ರೈಲು ವಿಜಯಪುರದಿಂದ ಯಶವಂತಪುರಕ್ಕೆ ಓಡಾಡಲು ಪ್ರಾರಂಭವಾಯಿತು. ಇದಾದ ನಂತರ ಬಳ್ಳಾರಿಯಿಂದ ಹರಿಹರ ದಾವಣಗೆರೆಯವರಿಗೆ ಡೆಮೋ ರೈಲು ಓಡಾಡುತ್ತದೆ.
ರೈಲ್ವೆ ಇಲಾಖೆಗೆ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲಿಗಿಂತ ಗೂಡ್ಸ್ ರೈಲು ಓಡಾಟದಿಂದ ಆದಾಯ ಮತ್ತು ಕಿಲೋಮಿಟರ್ ಉಳಿತಾಯ ಎರಡು ಲಾಭವಾಗುತ್ತದೆ. ಮೊದಲೇ ಆವೈಜ್ಞಾನಿಕದಿಂದ ಕೂಡಿದ ಪಟ್ಟಣದ  ರೈಲ್ವೆ ಸ್ಟೇಷನ್ ಬಹು ವರ್ಷಗಳಿಂದ ಫ್ಲಾಟ್ ಫಾರಂ ಇರಲಿಲ್ಲ. ರೈಲ್ವೆ ಹೋರಾಟ ಸಮಿತಿಯವರು  ನಿರಂತರ ಮನವಿ ಸಲ್ಲಿಸುವ ಮೂಲಕ ಕೊನೆಗೂ ಇತ್ತೀಚೆಗೆ ಫ್ಲಾಟ್ ಫಾರಂ ರೆಡಿಯಾಗಿದೆ. ಆದರೆ ಈ ರೈಲ್ವೆ ಗೇಟ್ ಸಮಸ್ಯೆ ಬಗೆಹರಿಯುತ್ತಿಲ್ಲ. ಇಲ್ಲಿ ಕೇವಲ ಎರಡು ಹಳಿ ಮಾತ್ರ ಹಾಕಲಾಗಿದೆ. ಮೂರರಿಂದ ನಾಲ್ಕು ಮಾರ್ಗವಿದ್ದರೆ ಕ್ರಾಸಿಂಗ್ ಸಂದರ್ಭದಲ್ಲಿ ಅನುಕೂಲವಾಗುತ್ತದೆ. . ಈಗಾಗಲೇ ಹಲವು ಬಾರಿ   ಪ್ಲೇ ಓವರ್ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. ಇದುವರೆಗೂ ಆ ಕಾರ್ಯ ಆರಂಭವಾಗಿಲ್ಲ. ಈ ಮಾರ್ಗದಲ್ಲಿ ಸಾವಿರಾರು ವಾಹನಗಳು, ಬಸ್ಸುಗಳು  ಜನರು ವಿದ್ಯಾರ್ಥಿಗಳು ನೌಕರರು, ರೋಗಿಗಳು ಆಂಬುಲೆನ್ಸ್ ಗಳು, ಓಡಾಡುತ್ತಾರೆ. ರೈಲು ಬರುವ ಮುಂಚೆ ಗೇಟ್ ಹಾಕಿದರೆ ಒಂದು ತಾಸು ಇವರೆಲ್ಲರಿಗೂ ತೊಂದರೆಯಾಗುತ್ತದೆ. ದೂರದ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಸಿಕ್ಕಾಕಿ ಕೊಂಡರೆ ರೋಗಿ ಆಸ್ಪತ್ರೆ ಸೇರುವ ಮುಂಚೆ ಇಲ್ಲೇ ಪ್ರಾಣ ಹೋಗಿಬಿಡುತ್ತದೆ. ಇದು ಒಂದು ದಿನದ ಸಮಸ್ಯೆಯಲ್ಲ ನಿರಂತರ ಸಮಸ್ಯೆಯಿಂದ ಜನರು ರೋಸಿ  ಹೋಗಿದ್ದಾರೆ. ರೈಲ್ವೆ ಗಾಗಿ ಹೋರಾಟ ಮಾಡಿದವರು. ಮೌನಕ್ಕೆ ಜಾರಿದ್ದಾರೆ. ಎಲ್ಲಾ  ಸಮಸ್ಯೆಗಳಿಂದ ಹೊರಬರಲು  ಸರ್ಕಾರ ಕೂಡಲೇ ಪ್ಲೇ ಓವರ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ದಾರಿ ಮಾಡುತ್ತಾರೆಯೇ ಕಾದು ನೋಡಬೇಕು.
ಶಾಲೆಯ ಸಮಯದಲ್ಲಿ ರೈಲ್ವೆ ಗೇಟ್ ಹಾಕುವುದರಿಂದ ದಿನಾಲು ಶಾಲೆಗೆ ಹೋಗಲು ತುಂಬಾ ತೊಂದರೆಯಾಗಿದೆ. ಶಾಲೆಗೆ ಅರ್ಧ ಗಂಟೆ ಲೇಟಾಗಿ ಹೋಗುವುದರಿಂದ ಶಿಕ್ಷಕರು ಹೊರಗಡೆ ನಿಲ್ಲಿಸುತ್ತಾರೆ.
 ವಿಕಾಸ್ ವಿದ್ಯಾರ್ಥಿ
ಈಗಾಗಲೇ ರೈಲ್ವೆ ಗೇಟ್ ನಲ್ಲಿ ನನ್ನ ಆಂಬುಲೆನ್ಸ್ ಐದು ಬಾರಿ ಸಿಕ್ಕಾಕಿಕೊಂಡಿದೆ. ಆ ಸಂದರ್ಭದಲ್ಲಿ ರೋಗಿಯ ನರಳಾಟ ನೋಡಿದರೆ ನನ್ನ ಕರುಳು ಚುರುಗುಟ್ಟುತ್ತದೆ. ಈ ಗೇಟ್ ಸಮಸ್ಯೆಯಿಂದ ಸಾರ್ವಜನಿಕರಿಗೂ ಸೇರಿದಂತೆ ರೋಗಿಗಳಿಗೆ ಬಹಳ ತೊಂದರೆಯಾಗಿದೆ.
 ನಜೀರ್
 ಆಂಬುಲೆನ್ಸ್ ಡ್ರೈವರ್