ಲಿಖಿತ ಮೌಖಿಕವಾಗಿ ವಿದ್ಯಾರ್ಥಿ ಕಲಿಕಾ ಮಟ್ಟ ಪರಿಶೀಲನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.07: ಪ್ರತಿ ಮಗುವಿನ ಕಲಿಕಾ ಮಟ್ಟವನ್ನು ಮೌಖಿಕ ಹಾಗೂ ಲಿಖಿತವಾಗಿ ಮುಖಾಮುಖಿ ಪರಿಶೀಲಿಸಿ, ಪ್ರಗತಿಕಂಡರೆ ಪ್ರಶಂಸಿಸಿ,ನ್ಯೂನತೆ ಕಂಡುಬಂದಲ್ಲಿ ಸಲಹೆ ಸೂಚನೆ ಹಾಗೂ ಮಾರ್ಗ ದರ್ಶನ ಮಾಡುತ್ತಿರುವುದು ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ, ಆರನೇ ಹಾಗೂ ಎಂಟನೇ ತರಗತಿ ಮಕ್ಕಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯವನ್ನು ಮೌಲ್ಯಾಂಕನ ಮಾಡಲು ಬಂದ ತಂಡವನ್ನು ಮಕ್ಕಳ ಸಮ್ಮುಖದಲ್ಲಿ ಪ್ರಾರ್ಥನೆಯಲ್ಲೇ ಸ್ವಾಗತಿಸಿ ಮಾತನಾಡಿದ ಅವರು ಈಗ ನಡೆಯುತ್ತಿರುವುದು ಮೊದಲನೇ ಹಂತ,ನವೆಂಬರ್ ತಿಂಗಳಲ್ಲಿ ಎರಡನೇ ಹಂತ ಹಾಗೂ ಮಾರ್ಚ್ ತಿಂಗಳಲ್ಲಿ ಮೂರನೇ ಹಂತ.ಹೀಗೆ ಮೂರು ಹಂತಗಳಲ್ಲಿ ನಡೆಯುವುದರಿಂದ ಹಂತದಿಂದ ಹಂತಕ್ಕೆ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳಬೇಕು.
ಶಿಕ್ಷಕರು ಮೌಲ್ಯಮಾಪನ ತಂಡ ನೀಡಿದ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಪ್ರಗತಿ ಸಾಧಿಸಿ ಬೇಕು.
ಪ್ರತಿ ಮಗುವಿಗು ಓದಲು, ಬರೆಯಲು ಹಾಗೂ ಸರಳ ಲೆಕ್ಕಗಳನ್ನು ಮಾಡವಂತೆ ಸಮರ್ಥರನ್ನಾಗಿ ತಯಾರಿ ಮಾಡಬೇಕಾದಂತಹ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ.ಪೋಷಕರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಅಂದ್ರಾಳ್ ಸಿ.ಆರ್. ಪಿ.ಕೇಶವರೆಡ್ಡಿ,ಕಮ್ಮರಚೇಡು ಶಾಲೆಯ ಟಿ.ಜಿ.ಟಿ ಶಿಕ್ಷಕರಾದ ಶಿವಮೂರ್ತಿ, ಎತ್ತಿನಬೂದಿಹಾಳ್ ಶಾಲೆಯ ಶಿಕ್ಷಕರಾದ ರಾಮಕೃಷ್ಣ, ಕುಬೇರ ಮೌಲ್ಯ ಮಾಪನ ಮಾಡಿದರು.
ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.