ಬೆಳೆ ವಿಮೆ ಪ್ರಚಾರ ವಾಹನಕ್ಕೆ ಚಾಲನೆ
ಕಲಬುರಗಿ,ಜು.7-ನಗರದ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲಮಪ್ರಭು ಪಾಟೀಲ್ ಅವರು 2024-25 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಬೆಳೆ ವಿಮೆಗೆ ಸಂಬಂಧಪಟ್ಟ ಪೋಸ್ಟರ ಹಾಗೂ ಹಸ್ತಪ್ರತಿ ಬಿಡುಗಡೆಗೊಳಿಸಿದರು.
2023-24ನೇ ಸಾಲಿನಲ್ಲಿ ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 28 ಗ್ರಾಮಗಳಲ್ಲಿ ಬೆಳೆ ಪರಿಹಾರ ಅಡಿಯಲ್ಲಿ 7898 ರೈತರಿಗೆ 8.78 ಕೋಟಿ ಹಾಗೂ ಬೆಳೆ ವಿಮೆ ಯೋಜನೆಯಡಿ 3770 ರೈತರಿಗೆ 2.65 ಕೋಟಿ ಮತ್ತು ತೊಗರಿ ಬೆಳೆ ನೆಟೆ ರೋಗದ ಪರಿಹಾರ 5139 ರೈತ ಫಲಾನುವಿಗಳಿಗೆ 5.01 ಕೋಟಿ ಹೀಗೆ ಒಟ್ಟು 16.807 ರೈತ ಫಲಾನುಭವಿಗಳಿಗೆ 16.45 ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಮಾತನಾಡಿ, ಎಲ್ಲಾ ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಬೇಕು ಎಂದು ಮನವಿ ಮಾಡಿಕೊಂಡರು. ತೊಗರಿ, ಹೆಸರು, ಉದ್ದು, ಸೋಯಾ, ಅವರೆ, ಎಳ್ಳು, ಹತ್ತಿ, ಬೆಳೆಗಳಿಗೆ ವಿಮೆ ಮಾಡಿಸಲು ಜು. 31 ಕೊನೆಯ ದಿನಾಂಕ ಆಗಿರುವುದರಿಂದ ಆದಷ್ಟು ಬೇಗ ಎಲ್ಲಾ ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ/ಸಾಮಾನ್ಯ ಸೇವಾ ಕೇಂದ್ರ , ಅಂಚೆ ಕಛೇರಿಯಲ್ಲಿ ನೊಂದಣಿ ಮಾಡಲು ಕೋರಿದರು.
ಬೆಳೆ ವಿಮೆ ಪರಿಹಾರ ಮತ್ತು ಇಲಾಖೆಯ ಯಾವುದೇ ಯೋಜನೆಯ ಲಾಭ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‍ಐಡಿ ನೊಂದಣಿ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ. ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಹಾಗೂ ಸಹಾಯಕ ಕೃಷಿ ನಿರ್ದೇಶಕ
ಚಂದ್ರಕಾಂತ ಜೀವಣಗಿ, ಬೆಳೆ ವಿಮೆ ಪ್ರತಿನಿಧಿಗಳಾದ ಶಿವು ನರೋಣಾ ಮತ್ತು ಸೋಮಲಿಂಗಯ್ಯ ಹಾಗೂ ಕೃಷಿ ಅಧಿಕಾರಿಗಳಾದ ಅಬ್ದುಲ್ ಕರೀಂ ಮತ್ತು ಸಹಾಯಕ ಕೃಷಿ ಅಧಿಕಾರಿಗಳಾದ ರಾಹುಲ್ ಚವ್ಹಾಣ ಹಾಗೂ ಗೌಸ್ ಆಬೀದ, ರೈತರು ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.