ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನ ಸುಟ್ಟು ಹಾಕಿದ ದುಷ್ಕರ್ಮಿಗಳು
ಕಲಬುರಗಿ,ಜು.7-ಮನೆಯ ಗೇಟಿಗೆ ಕಲ್ಲು ಹೊಡೆದಿದ್ದು ಏಕೆ ಎಂದು ಪ್ರಶ್ನಿಸಿದಕ್ಕೆ ಬಟ್ಟೆ ಹರಿದು ಹಾಕಿ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ದುಷ್ಕರ್ಮಿಗಳು ಕದ್ದೊಯ್ದು ಹನುಮಾನ ನಗರದಲ್ಲಿರುವ ಹಾಳು ಜಾಗದಲ್ಲಿ ಅದನ್ನು ಸುಟ್ಟು ಹಾಕಿದ್ದಾರೆ ಎಂದು ಪಂಚಶೀಲ ನಗರದ ಸಂಜುಕುಮಾರ ವೆಂಕಟರಾವ ಕಾಂಬಳೆ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಂಜುಕುಮಾರ ಅವರು ಜು.4 ರಂದು ರಾತ್ರಿ 10 ಗಂಟೆ ಸುಮಾರಿಗೆ ಪತ್ನಿ, ತಂದೆ, ತಾಯಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಪಂಚಶೀಲ ನಗರದ ಅಭಿಷೇಕ ರೆಡ್ಡಿ, ಸಚಿನ್ ಮಾರುತಿ, ದರ್ಶನ್, ದರ್ಶನ್ ಹುಣಸಗಿ ಮತ್ತು ವಿಶ್ವನಾಥ ದೇವೆಂದ್ರ ಅವರು ಇವರ ಮನೆಯ ಗೇಟಿಗೆ ಕಲ್ಲು ಹೊಡೆದಿದ್ದಾರೆ ಎನ್ನಲಾಗಿದೆ. ಮನೆಯ ಗೇಟಿಗೆ ಕಲ್ಲು ಹೊಡೆದಿದ್ದೇಕೆ ಎಂದು ಪ್ರಶ್ನಿಸಿದಕ್ಕೆ ಈ ಐವರು ಯುವಕರು ಅವರ ಬಟ್ಟೆ ಹರಿದು ಹಾಕಿದ್ದಾರೆ. ಜು.5 ರಂದು ರಾತ್ರಿ 10 ಗಂಟೆಗೆ ಸಂಜೀವಕುಮಾರ ಅವರು ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಬೈಕ್‍ನ್ನು ಕಳವು ಮಾಡಿ ಹನುಮಾನ ನಗರದಲ್ಲಿರುವ ಹಾಳು ಜಾಗದಲ್ಲಿ ಸುಟ್ಟು ಹಾಕಲಾಗಿದೆ. ಈ ಸಂಬಂಧ ಸಂಜುಕುಮಾರ ಅವರು ಅಭಿಷೇಕ ರೆಡ್ಡಿ, ಸಚಿನ್ ಮಾರುತಿ, ದರ್ಶನ್, ದರ್ಶನ್ ಹುಣಸಗಿ ಮತ್ತು ವಿಶ್ವನಾಥ ದೇವೆಂದ್ರ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.