ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ
ಕಲಬುರಗಿ:ಜು.7: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನವ ಕರ್ನಾಟಕ ಎಂಆರ್‍ಡಬ್ಲ್ಯು/ವಿಆರ್‍ಡಬ್ಲ್ಯು/ಯುಆರ್‍ಡಬ್ಲ್ಯು ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಬಾಜಿ ಮೇಟಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ಹಲವು ರೀತಿಯ ಅಕ್ರಮಗಳಲ್ಲಿ ತೊಡಗಿದು ್ದ ದೈಹಿಕ ವಿಕಲಚೇತನರು, ದೃಷ್ಟಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ತಲುಪಬೇಕಾದ ಸೌಲಭ್ಯಗಳನ್ನು ಒದಗಿಸದೆ ವ್ಯಾಪಕ ಅಕ್ರಮಗಳಲ್ಲಿ ತೊಡಗಿದ್ದಾರೆ. ಮೇಲಾಗಿ, ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‍ಡಬ್ಲ್ಯು), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್‍ಡಬ್ಲ್ಯು) ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಗೆ (ಯುಆರ್‍ಡಬ್ಲ್ಯು) ಹಲವು ಬಗೆಯಲ್ಲಿ ಮಾನಸಿಕ ಕಿರುಕುಳ ನೀಡುತ್ತಾ ಸಾರ್ವಭೌಮ ಅಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿಯ ಸರಕಾರಿಅಂಧ ಮಕ್ಕಳ (ಬಾಲಕರ) ವಸತಿ ನಿಲಯದ ನಾಲ್ವರು ಅಂಧ ವಿದ್ಯಾರ್ಥಿಗಳ ಮೇಲೆ ಡಿಸೆಂಬರ್ 1, 2023ರಂದು ನಿಷ್ಕಾರುಣ್ಯವಾಗಿ ಕ್ರಮಕೈಗೊಂಡು ಆ ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಮನೆಗೆ ಕಳುಹಿಸಲಾಗಿದೆ.ಮೇಲಾಗಿ, ಈ ಬಡ ಮತ್ತು ಅಸಹಾಯಕ ಮಕ್ಕಳ ಮೇಲೆ ಕ್ರಮ ಕೈಗೊಳ್ಳುತ್ತಿರುವ ತಮ್ಮ ಧಾಟಿಯನ್ನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳ ಹಿಂದಿನ ವಿಡಿಯೋಕ್ಲಿಪ್ಪಿಂಗ್ ಬಳಸಿಕೊಂಡು ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹೀಗೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಪುರಾವೆಯಾಗಿ ಬಳಸಿಕೊಂಡಿರುವ ವಿಡಿಯೋ ತುಣುಕನ್ನು ವಿಧಿ ವಿಜ್ಞಾನ ಸಂಸ್ಥೆಯ (ಫೋರೆನ್ಸಿಕ್ ಲ್ಯಾಬೊರೇಟರಿ) ತಪಾಸಣೆಗೆ ಒಳಪಡಿಸಿ ಸೂಕ್ಷ್ಮವಾಗಿ ಪರಾಮರ್ಶಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಅಂಬಾಜಿ ಮೇಟಿಕೋರಿದ್ದಾರೆ.
ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನಾಲ್ವರು ದೃಷ್ಟಿ ವಿಕಲ ಚೇತನ ಮಕ್ಕಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅವರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿದ್ದಾಗ್ಯೂ, ಈ ನಾಲ್ಕೂ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ನಿಯಮಬಾಹಿರ ಹರಾಜು:
ಕಲಬುರಗಿಯ ಸರಕಾರಿಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಜೂನ್ 21, 2024ರಂದು ಅಕ್ರಮವಾಗಿ ಹಳೆಯ ಪೀಠೋಪಕರಣಗಳ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗಿದೆ.ಹೀಗೆ ಹರಾಜು ಪ್ರಕ್ರಿಯೆ ಕೈಗೊಳ್ಳುವುದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿ, ಆ ನಿಟ್ಟಿನಲ್ಲಿಅಗತ್ಯ ಎನಿಸಿದರೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ಬಳಿಕ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ.ಆದರೆ, ಈ ನಿಟ್ಟಿನಲ್ಲಿಯಾವುದೇ ನಿಯಮಗಳನ್ನು ಪಾಲಿಸದೆ ಕೇವಲ ಕಚೇರಿಯ ಸೂಚನಾ ಫಲಕಕ್ಕೆ ನೋಟಿಸ್ ಲಗತ್ತಿಸಿದಂತೆ ಮಾಡಿ ಅಕ್ರಮವಾಗಿ ಹರಾಜು ಪ್ರಕ್ರಿಯೆ ಕೈಗೊಂಡಿದ್ದಾರೆ.ಮೇಲಾಗಿ, ಈ ಶಾಲೆಯ ಉತ್ತಮ ಗುಣಮಟ್ಟದ ಪೀಠೋಪಕರಣಗಳನ್ನು ‘ಅನುಪಯುಕ್ತ’ ಎಂದು ತಾವೇ ನಿರ್ಧಾರ ಕೈಗೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ವಂಚನೆ ಮಾಡಲಾಗಿದೆ.ಸರಕಾರಿ ಅಂಧ ಮಕ್ಕಳ ಶಾಲೆಯಲ್ಲಿ ಸಹ ಇಂಥದ್ದೇ ಅಕ್ರಮ ಹರಾಜು ಪ್ರಕ್ರಿಯೆ ಮಾರ್ಚ್ 9, 2024 ರಂದು ಕೈಗೊಳ್ಳಲಾಗಿದೆ ಎಂದು ದೂರಿದರು.
ಇನ್ನು, ಸರಕಾರಿಅಂಧ ಮಕ್ಕಳ ಶಾಲೆಯಲ್ಲಿ ಮೇಲಿಂದ ಮೇಲೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಸಕ್ತ 2024ನೇ ಸಾಲಿನಲ್ಲಿ ಈವರೆಗೆ ಒಟ್ಟು ಆರು ಬಾರಿ ದುರಸ್ತಿಯ ಹೆಸರಿನಲ್ಲಿ ಬಿಲ್ ಎತ್ತಲಾಗಿದೆ.ಒಂದೇ ಶಾಲೆಯಲ್ಲಿ ಕೇವಲ ಆರು ತಿಂಗಳ ಕಾಲಾವಕಾಶದಲ್ಲಿಆರು ಬಾರಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು ತರ್ಕಬದ್ಧವೇ ಎಂಬುದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದರು.
ಗೌರವಾಧ್ಯಕ್ಷದತ್ತಾತ್ರೇಯ ಕುಡಕಿ, ಶಿವಕುಮಾರ್ ಮುಡ್ಡಿ, ತುಕಾರಾಂ ತುಳಸಿರಾಂ ಹಿರೋಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಡೆಯದ ಕಾರ್ಯಾಗಾರ: ತನಿಖೆಗೆ ಆಗ್ರಹ
ಮಾರ್ಚ್ 16, 2024ರಂದು ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಶ್ರವಣ ಸಾಧನಗಳ ವಿತರಣೆ ಕಾರ್ಯಾಗಾರ ಕೈಗೊಂಡಿರುವುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.ಆದರೆ, ಹಿರಿಯ ನಾಗರಿಕರ ಕಾರ್ಯಾಗಾರ ಕೈಗೊಳ್ಳದೆ ಅಕ್ರಮ ಎಸಗಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಎಲ್ಲವನ್ನೂ ವಿವರಿಸಲಾಗಿದೆ ಎಂದು ಅಂಬಾಜಿ ಮೇಟಿ ಹೇಳಿದರು.
ಹಿರಿಯ ನಾಗರಿಕರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದೇ ನಿಜವಾಗಿದ್ದಲ್ಲಿ ಅಂದಿನ ಕಾರ್ಯಾಗಾರದ ಸಂಪೂರ್ಣ ವಿಡಿಯೋ ಚಿತ್ರೀಕರಣದ ದೃಶ್ಯಾವಳಿಯ ಪರಿಶೀಲನೆ ಕೈಗೊಳ್ಳುವುದರ ಜೊತೆಗೆ ಕಾರ್ಯಾಗಾರದ ಎಲ್ಲ ಫಲಾನುಭವಿಗಳ ಸೋಷಿಯಲ್ ಆಡಿಟಿಂಗ್ ಕೈಗೊಳ್ಳಬೇಕೆಂದು ಮೇಟಿ ಒತ್ತಾಯಿಸಿದರು.