ಬಸವ ಎಕ್ಸಪ್ರೆಸ್ ರೈಲು ವಿಸ್ತರಣೆಗೆ ಶಾಸಕ ಯತ್ನಾಳರಿಂದ ರೈಲ್ವೆ ಸಚಿವರಿಗೆ ಪತ್ರ
ವಿಜಯಪುರ,ಜು.7: ಮೈಸೂರು-ಬಾಗಲಕೋಟೆ ಮಧ್ಯ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲನ್ನು ಗದಗ ವರೆಗೆ ವಿಸ್ತರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.
ಮೈಸೂರು ನಗರದಿಂದ ಬಾಗಲಕೋಟೆ ನಗರ ಮಧ್ಯ ಸಂಚರಿಸುವ ಬಸವ ಎಕ್ಸಪ್ರೆಸ್ ರೈಲು ಮೈಸೂರಿನಿಂದ ಮಧ್ಯಾಹ್ನ 1.30 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.10 ಕ್ಕೆ ಬಾಗಲಕೋಟೆಗೆ ಆಗಮಿಸಲಿದ್ದು, ಅದೇ ದಿನ ಮಧ್ಯಾಹ್ನ 2.30 ಕ್ಕೆ ಬಾಗಲಕೋಟೆಯಿಂದ ಹೊರಡಲಿದೆ. ಸುಮಾರು ಗಂಟೆಗಳ ಕಾಲ ಬಾಗಲಕೋಟೆ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಗುತ್ತಿದೆ.
ವಿಜಯಪುರದಿಂದ ಗದಗಕ್ಕೆ ಬೆಳಿಗ್ಗೆ 7.45 ರಿಂದ ಮಧ್ಯಾಹ್ನ 2.40 ರವರೆಗೆ ಯಾವುದೇ ರೈಲುಗಳಿಲ್ಲ. ಹೀಗಾಗಿ ಈ ರೈಲನ್ನು ಗದಗ ವರೆಗೆ ವಿಸ್ತರಿಸುವುದರಿಂದ ಈ ಭಾಗದ ಪ್ರಯಾಣಿಕರಿಗೆ, ರೈತರಿಗೆ ಈ ಮಾರ್ಗದಲ್ಲಿ ಸಂಚರಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ, ಸೊಲ್ಲಾಪುರ, ಅಕ್ಕಲಕೋಟೆ, ದುದನಿ, ಗಾಣಗಾಪುರ ಮತ್ತು ಕಲಬುರ್ಗಿಗೆ ಪ್ರಯಾಣಿಸುವ ಪ್ರಯಾಣಿಕರಿಗೂ ಅನುಕೂಲದ ಜೊತೆಗೆ ಗದಗ ಮತ್ತು ಕಲಬುರ್ಗಿ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಹ ಸಹಾಯವಾಗುತ್ತದೆ.
ವಿಜಯಪುರ ಮತ್ತು ಕಲಬುರ್ಗಿ ಪ್ರವಾಸೋದ್ಯಮ ಸಾಮಥ್ರ್ಯವನ್ನು ಅಗಾಧವಾಗಿ ಹೆಚ್ಚಿಸಿ, ಈ ಜಿಲ್ಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ. ನಿಮಗೆ ತಿಳಿದಿರುವಂತೆ, ಕರ್ನಾಟಕದ ಇತರ ಪ್ರದೇಶಗಳಿಗೆ ಹೋಲಿಸಿದರೆ, ನಮ್ಮ ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೆಚ್ಚಿನ ರೈಲು ಸಂಪರ್ಕವು ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಅಗಾಧವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಬಹುಕಾಲದ ಬೇಡಿಕೆಯಾಗಿದ್ದು, ಬಸವ ಎಕ್ಸಪ್ರೆಸ್ ರೈಲನ್ನು ಗದಗಕ್ಕೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.