ತಿದ್ದುಪಡಿಯಾದ ಮೂರು ಕಾನೂನುಗಳನ್ನು ತಜ್ಞರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಜಾರಿ : ಕಾನೂನು ಸಚಿವ ಹೆಚ್ ಕೆ ಪಾಟೀಲ
ಅಥಣಿ :ಜು.7: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತಂದಿದ್ದು, ಕರ್ನಾಟಕ ಸರ್ಕಾರದಿಂದ ಕಾನೂನು ತಜ್ಞರ ಜೊತೆ ಚರ್ಚಿಸಿ 23 ಸಲಹೆಗಳನ್ನು ನೀಡಿದ್ದೆವು. ಅವುಗಳಲ್ಲಿ ಒಂದನ್ನು ಅಳವಡಿಸಿಕೊಂಡಿಲ್ಲ. ನಮ್ಮ ರಾಜ್ಯದಲ್ಲಿ ಈ ಕಾನೂನುಗಳನ್ನ ಜಾರಿಗೊಳಿಸುವ ಪೂರ್ವದಲ್ಲಿ ನಮ್ಮ ಸಲಹೆಗಳನ್ನ ಸೇರ್ಪಡಿಸುವ ಚಿಂತನೆ ನಡೆದಿದೆ, ಶೀಘ್ರದಲ್ಲಿಯೇ ನಿರ್ಣಯ ಕೈಕೊಳ್ಳಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಅವರು ಶನಿವಾರ ಅಥಣಿ ಪಟ್ಟಣದ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಉಪ ಚುನಾವಣೆ ಅಭ್ಯರ್ಥಿ ಗಜಾನನ ಮಂಗಸೂಳಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕಾನೂನುಗಳನ್ನು ಜಾರಿಗೆ ತರುವ ಪೂರ್ವದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡುವಂತೆ ಪತ್ರ ಬರೆದಿದ್ದರು. ನನ್ನ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರ ಸಮಿತಿಯಲ್ಲಿ 23 ಸಲಹೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೆವು. ಕೇಂದ್ರ ಸರ್ಕಾರ ಅದರಲ್ಲಿ ಒಂದು ಸಲಹೆಗಳನ್ನು ಅಳವಡಿಸಿಲ್ಲ, ಈ ಬಗ್ಗೆ ಚಿಂತನೆ ನಡೆಸಿ ರಾಜ್ಯದಲ್ಲಿ ಈ ಕಾನೂನನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಯಾವುದೇ ಅಡೆತಡೆ ಇಲ್ಲ :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಿದೆ. ರಾಜ್ಯದ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಈ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಎನ್ನುವುದು ಕೇವಲ ಗಾಳಿಮಾತು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯಿಸಿ ಈಗಾಗಲೇ ಪ್ರಕರಣವನ್ನು ಸರ್ಕಾರ ಎಸ್?ಐಟಿ ಪೆÇಲೀಸರಿಗೆ ನೀಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಕೆಲವು ಅಧಿಕಾರಿಗಳನ್ನು ಕೂಡ ಅಮಾನತ್ತು ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು.
ಮುಡಾ ನಿಗಮದ ಹಗರಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಇಂತಹ ಹಗರಣ ಆಗಿಲ್ಲ ಎಂದರು.
ಸಿಎಂ ಬದಲಾವಣೆ, ಕೇವಲ ಗಾಳಿ ಸುದ್ದಿ:
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಎಂಬುದು ಕೇವಲ ಗಾಳಿ ಸುದ್ದಿಯಾಗಿದ್ದು, ಇದು ಮಾಧ್ಯಮಗಳ ಸೃಷ್ಟಿಯಾಗಿದೆ. ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಮನೆ ಮನ ತಲುಪಿರುವುದರಿಂದ ರಾಜ್ಯದ ಜನತೆ ಸರ್ಕಾರದ ಮೇಲೆ ಇನ್ನಷ್ಟು ಅಭಿವೃದ್ಧಿಯೇ ನಿರೀಕ್ಷೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲಾಗುವುದು.