ಯುಪಿಎಸ್ಸಿ ಪ್ರಿಲಿಮನರಿ: ಡಿಎಂಆರ್ ವಿದ್ಯಾರ್ಥಿನಿ ಧರಣಿ ಎನ್.ಶೆಟ್ಟಿ ತೇರ್ಗಡೆ
ಕೋಲಾರ,ಜು.೭- ರಾಷ್ಟ್ರದ ಅತ್ಯುನ್ನತ ಪದವಿಗಳಿಗೆ ಯುಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಿಲಿಮನರಿ ಹಂತದಲ್ಲಿ ಧರಣಿ ಎನ್.ಶೆಟ್ಟಿ ತೇರ್ಗಡೆಯಾಗಿದ್ದಾರೆ. ಸುಗಟೂರು ಮೂಲದ ವರ್ತಕ ನಾಗೇಂದ್ರಶೆಟ್ಟಿ ಹಾಗೂ ಸವಿತಾಶೆಟ್ಟಿ ದಂಪತಿಯ ಪುತ್ರಿ ಧರಣಿ ಎನ್.ಶೆಟ್ಟಿ ಅವರು, ಕೋಲಾರ ನಗರದ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.
ಬಾಗಲಕೋಟೆಯ ತೋಟಗಾರಿಕೆ ವಿವಿಯಲ್ಲಿ ಎರಡು ವರ್ಷಗಳ ಹಿಂದೆ ೧೬ ಸ್ವರ್ಣ ಪದಕಗಳೊಂದಿಗೆ ಧರಣಿ ಎನ್.ಶೆಟ್ಟಿ ಪದವಿ ಪಡೆದಿದ್ದಾರೆ. ಕೋಲಾರದ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಆರು ತಿಂಗಳ ಅವಧಿಯ ತರಬೇತಿ ಪಡೆದಿದ್ದ ಧರಣಿ ಎನ್. ಶೆಟ್ಟಿ ಅವರು, ಇದೇ ಜೂನ್‌ನಲ್ಲಿ ನಡೆದಿದ್ದ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಪ್ರಸ್ತುತ ಪ್ರಿಲಿಮ್ಸ್ ತೇರ್ಗಡೆಯಾಗಿರುವ ಧರಣಿ ಎನ್.ಶೆಟ್ಟಿ ಅವರು, ಸೆಪ್ಟೆಂಬರ್‌ನಲ್ಲಿ ನಡೆಯುವ ಮುಖ್ಯ ಪರೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದಾರೆ.
ಕೋಲಾರದ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಉಪನ್ಯಾಸಕರಾದ ನಾಗೇಶ್, ಪಾಶ್ವನಾಥ್, ಅಶೋಕ್, ವಿವೇಕಾನಂದ ಅವರುಗಳ ಮಾರ್ಗದರ್ಶನದಲ್ಲಿ ಧರಣಿ ಎನ್.ಶೆಟ್ಟಿ ಅಭ್ಯಾಸ ಮಾಡಿದ್ದರು. ಪ್ರಿಲಿಮ್ಸ್‌ನ ಫಲಿತಾಂಶ ಪ್ರಕಟವಾದ ನಂತರ ಸಂಸ್ಥೆಯ ಮಹಾಪೋಷಕ ಡಿ.ದೇವರಾಜ ಅವರನ್ನು ಧರಣಿ ಎನ್.ಶೆಟ್ಟಿ ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.
ಧರಣಿ ಎನ್.ಶೆಟ್ಟಿ ಅವರಿಗೆ ಶುಭ ಹಾರೈಸಿರುವ ಡಿ.ದೇವರಾಜ ಅವರು, ಮುಂದಿನ ಸೆಪ್ಟೆಂಬರ್‌ನಲ್ಲಿ ಎದುರಾಗುವ ಮುಖ್ಯ ಪರೀಕ್ಷೆಗೆ ನಡೆಸಬೇಕಾದ ತಯಾರಿಯ ಬಗ್ಗೆ ಅಗತ್ಯ ಮಾರ್ಗದರ್ಶನ ಕೊಟ್ಟಿದ್ದಾರೆ. ಧರಣಿ ಎನ್.ಶೆಟ್ಟಿ ಅವರ ಪೋಷಕರಾದ ನಾಗೇಂದ್ರಶೆಟ್ಟಿ-ಸವಿತಾಶೆಟ್ಟಿ ಅವರು ಸುಗಟೂರು ಗ್ರಾಮದಲ್ಲಿ ಕಿರಾಣಿ ಅಂಗಡಿಯನ್ನು ಹೊಂದಿದ್ದಾರೆ. ಉನ್ನತ ಹುದ್ದೆಗೇರಬೇಕೆಂಬ ಪುತ್ರಿ ಧರಣಿ ಅವರು ಮಹತ್ವಾಕಾಂಕ್ಷೆಗೆ ಪೋಷಕರು ಬೆಂಬಲವಾಗಿ ನಿಂತಿದ್ದಾರೆ.
ಡಿಎಂಆರ್ ತರಬೇತಿ ಸಂಸ್ಥೆಗೆ ಹೆಮ್ಮೆಯ ವಿಷಯ: ಡಿಸಿಪಿ ಡಿ.ದೇವರಾಜ್
ಕೋಲಾರ ತಾಲೂಕು ಕೋರಗಂಡಹಳ್ಳಿ ಮೂಲದವರಾದ ಡಿ.ದೇವರಾಜ್ ಅವರು ಪ್ರಸ್ತುತ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿದ್ದಾರೆ. ಕೋಲಾರ ನಗರದಲ್ಲಿ ಡಿಎಂಆರ್ ಹೆಸರಿನಲ್ಲಿ ಡಿ.ದೇವರಾಜ ಅವರು ಎರಡು ವರ್ಷಗಳ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಪ್ರಸ್ತುತ ಯುಪಿಎಸ್‌ಸಿ ಪ್ರಿಲಿಮನರಿ ಉತ್ತೀರ್ಣವಾಗಿರುವ ಧರಣೀ ಎನ್.ಶೆಟ್ಟಿ ಅವರು ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿ.
ಕೋಲಾರ ಜಿಲ್ಲೆಯ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು ಎನ್ನುವ ಆಕಾಂಕ್ಷೆಯಿದೆ. ಆದರೆ, ಸೂಕ್ತ ಮಾರ್ಗದರ್ಶನದ ಕೊರತೆಯಿರುವ ಕಾರಣ ವಿದ್ಯಾರ್ಥಿಗಳು ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಸಂಕಷ್ಟ ಮತ್ತು ಅಭದ್ರತೆಯ ಕಾರಣದಿಂದಾಗಿ ಬೆಂಗಳೂರುನಲ್ಲಿ ಗುಣಮಟ್ಟದ ತರಬೇತಿಯನ್ನು ಪಡೆಯಲು ಈ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸುವ ಮೊದಲ ಹೆಜ್ಜೆಯಾಗಿ ಕೋಲಾರದಲ್ಲಿ ಡಿಎಂಆರ್ ಉಚಿತ ತರಬೇತಿ ಸಂಸ್ಥೆಯನ್ನು ಹುಟ್ಟುಹಾಕಲಾಯಿತು.
ಕೋಲಾರದ ಡಿಎಂಆರ್ ಸಂಸ್ಥೆಯಲ್ಲಿ ಇದುವರೆಗೂ ನಾಲ್ಕು ತಂಡಗಳು ತರಬೇತಿಯನ್ನು ಮುಗಿಸಿವೆ. ಇಲ್ಲಿವರೆಗೂ ೨೫೦ ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದು, ಈ ಪೈಕಿ ಗ್ರಾಮೀಣ ಪ್ರದೇಶದ ಯುವತಿಯರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಸುಸಜ್ಜಿತವಾದ ಗ್ರಂಥಾಲಯದ ವ್ಯವಸ್ಥೆಯಿದ್ದು, ನುರಿತ ತರಬೇತುದಾರರಿದ್ದಾರೆ. ಪ್ರಾಥಮಿಕ ಹಂತದಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತಕ್ಕೆ ಅಗತ್ಯವಾದ ಮಾರ್ಗದರ್ಶನವೂ ಇಲ್ಲಿ ಲಭ್ಯವಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ನಾನು ಜನಿಸಿದ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸುವ ಪ್ರಯತ್ನವಿದು. ಉನ್ನತ ಪದವಿಗಳಿಗೆ ಏರಬೇಕು ಎನ್ನುವ ಪ್ರಾಮಾಣಿಕ ಆಸೆಯುಳ್ಳ ಗ್ರಾಮೀಣ ಮಕ್ಕಳನ್ನು ಪ್ರೋತ್ಸಾಹಿಸುವ ವ್ಯವಸ್ಥೆಯಿದಾಗಿದೆ. ಹಳ್ಳಿ ಸೊಗಡಿನ ಮಕ್ಕಳು ಉತ್ತಮ ಸ್ಥಾನದಲ್ಲಿದ್ದರೆ ದೇಶಕ್ಕೆ ಒಳ್ಳೆಯ ಆಡಳಿತ ಕೊಡುತ್ತಾರೆ ಎನ್ನುವ ಭರವಸೆಯಿದೆ. ಪ್ರಿಲಿಮ್ಸ್ ಉತ್ತೀರ್ಣವಾಗಿರುವ ಸುಗಟೂರು ಗ್ರಾಮದ ಧರಣಿ ಎನ್.ಶೆಟ್ಟಿಗೆ ಒಳ್ಳೆಯದಾಗಲಿ. ಡಿಎಂಆರ್ ತರಬೇತಿ ಸಂಸ್ಥೆಗೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ಡಿ.ದೇವರಾಜ. ತಿಳಿಸಿದ್ದಾರೆ.