ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು
ಗೌರಿಬಿದನೂರು.ಜು.೭- ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತದಿಂದಲೇ ಪಠ್ಯ ವಿಷಯಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಸಿದ್ಧತೆ ಮಾಡಿಕೊಂಡು, ದಾನಿಗಳ ಸಹಕಾರವನ್ನು ಪಡೆದು ಉನ್ನತ ಮಟ್ಟದ ಶಿಕ್ಷಣದ ಗುರಿ ಹೊಂದಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮರಿಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹೊಸೂರು ಹೋಬಳಿಯ ಕೋಟಾಲದಿನ್ನೆಯಲ್ಲಿನ ಸರ್ಕಾರಿ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ನೋಟ್ ಪುಸ್ತಕ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಜತೆಗೆ ಶಿಸ್ತು, ಸಂಯಮವನ್ನು ಕಲಿತು ಬದುಕನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಈ ಕಾಲೇಜಿನಲ್ಲಿ ಸ್ವಚ್ಛತೆ, ಶಿಸ್ತು, ಉಪನ್ಯಾಸಕರ ಭೋದನಾ ಸಾಮರ್ಥ್ಯದ ಬದ್ಧತೆ ಎಲ್ಲವೂ ಗುಣಮಟ್ಟದಿಂದ ಕೂಡಿದ್ದು, ವಿದ್ಯಾರ್ಥಿಗಳು ಆಸಕ್ತಿ ಮತ್ತು ಅವದಾನದಿಂದ ಕಲಿತು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಇದರಿಂದಾಗಿ ನಿಮ್ಮೆಲ್ಲರ ಶೈಕ್ಷಣಿಕ ಪ್ರಗತಿಗೆ ಸಹಕರಿಸಿದ ದಾನಿಗಳ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಆದಿಶೇಷರಾವ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಪದವಿ ಪೂರ್ವ ಕಾಲೇಜು ಹಂತದಿಂದಲೇ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಆಸಕ್ತಿ ಮತ್ತು ಅವದಾನದಿಂದ ಶಿಕ್ಷಣವನ್ನು ಕಲಿಯಬೇಕಾಗಿದೆ. ಇದರಿಂದಾಗಿ ನಿಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಆಕರ್ಷಿತರಾಗದೆ ಕಲಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಓದಬೇಕಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ವಿಶ್ವಾನಂದ ಸರಸ್ವತಿ ಯವರು ತಮ್ಮ ತಾಯಿ ಶಾರದಮ್ಮ ರವರ ಹೆಸರಿನಲ್ಲಿ ೧೭೦ ಮಂದಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ೩೦ ಮಂದಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಗಳನ್ನು ವಿತರಣೆ ಮಾಡಲು ಕಾರಣೀಭೂತರಾದರು. ಅವರ ಬದುಕು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸಗೌಡ, ದಾನಿಗಳಾದ ವಿಶ್ವಾನಂದ ಸರಸ್ವತಿ, ನಿವೃತ್ತ ಪ್ರಾಂಶುಪಾಲರಾದ ಬಿ.ಎಸ್.ರಾಜಶೇಖರ್, ವಕೀಲರಾದ ಶ್ಯಾಮ್, ಉಪನ್ಯಾಸಕರಾದ ಸಂಗಮೇಶ್, ಬಿ.ಎನ್.ಶಾಂತ, ಎಸ್.ಆನಂದ್, ರವಿ, ಶಿವಾನಂದ್, ಟಿ.ಆರ್.ಸುಭಾಷಿಣಿ, ವೆಂಕಟೇಶ್, ಹಮಾನಾಯಕ್, ತೇಜಸ್ ಗೌಡ, ಸಿಬ್ಬಂದಿ ವರ್ಗದವರಾದ ಪ್ರಭಾಕರ್, ಅನಿಲ್ ಕುಮಾರ್, ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದರು.