ಅಧಿಕಾರಿಗಳ ದಾಳಿ, ಸುಮಾರು ೩೫೨ ಕೆ.ಜಿ ಪ್ಲಾಸ್ಟಿಕ್ ವಶ
ವಿಜಯಪುರ.ಜು೭: ಪರಿಸರಕ್ಕೆ ಮಾರಕವಾಗಿರವ ನಿಷೇಧಿತ ಪ್ಲಾಸ್ಲಿಕ್ ವಸ್ತುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಜಿಆರ್ ಸಂತೋಷ್ ಕುಮಾರ್ ಹಾಗೂ ಆರೋಗ್ಯಾಧಿಕಾರಿ ಲಾವಣ್ಯ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಸುಮಾರು ೩೫೨ ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು ೪ ಸಾವಿರ ದಂಡ ವಿಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೋಟೆಲ್, ಅಂಗಡಿ, ಬೇಕರಿ, ಹೂ ಮಾರಾಟಗಾರರು ಮುಂತಾದ ಕಡೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್, ಪ್ಲೇಟ್, ಲೋಟ, ತಟ್ಟೆಗಳ ಬಳಕೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ದಿಢೀರನೇ ಪಟ್ಟಣದ ಹಲವೆಡೆ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡುತ್ತಿದ್ದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಜಿಆರ್ ಸಂತೋಷ್ ಕುಮಾರ್ ಮಾತನಾಡಿ, ಈಗಾಗಲೇ ಹಲವು ಬಾರಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪುರಸಭೆ ವತಿಯಿಂದ ಜಾಗೃತಿ ಮೂಡಿಸಲಾಗಿದೆ. ಅಷ್ಟಾದರೂ ಕೂಡ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದ ಬಸ್ ಸ್ಟಾಂಡ್ ಬಳಿ ಇರುವ ಹೋಲ್ ಸೇಲ್ ಅಂಗಡಿಗಳಲ್ಲಿ ದಾಸ್ತಾನು ಇರಿಸಿಕೊಂಡಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದು ಮಾಲೀಕರಿಗೆ ಸ್ಥಳದಲ್ಲೇ ೪ ಸಾವಿರ ದಂಡ ವಿಧಿಸಿ, ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡದಂತೆ ಎಚ್ಚರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಿಸರ ಅಭಿಯಂತರ ಶೇಖರ್ ಆರೋಗ್ಯ ಅಧಿಕಾರಿ ಲಾವಣ್ಯ ಪುರಸಭಾ ಸಿಬ್ಬಂದಿ ಸ್ನೇಹ, ಪೃಥ್ವಿ, ಫಹಾದ್ ಅಹಮದ್, ಮೂರ್ತಿ, ಮೇಸ್ತ್ರಿ ಅಪ್ಪಿ ಪೌರಕಾರ್ಮಿಕರು ಇದ್ದರು.