ಮಹಿಳೆಯರು ವ್ಯಸನಿಗಳಾಗುತ್ತಿರುವುದು ಆತಂಕಕಾರಿ
ಸಂಜೆವಾಣಿ ನ್ಯೂಸ್
ಮೈಸೂರು.ಜು.07:- ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಗೀಳಾಗಿ ಪರಿಣಮಿಸುವ ಮಾದಕ ವಸ್ತುಗಳ ಸೇವನೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರೇ ಹೆಚ್ಚು ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿಗಳಾದ ಡಾ. ಪಿ.ಸಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಮೈಸೂರು ಇವರ ಸಹಯೋಗದೊಂದಿಗೆ ಎನ್.ಆರ್. ಮೊಹಲ್ಲಾದ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆ ಇಂದು ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿದೆ. ಇದರಿಂದ ಚಟಕ್ಕೆ ದಾಸನಾಗಿರುವ ವ್ಯಕ್ತಿಗೆ ವೈಯಕ್ತಿಕವಾಗಿ ಮತ್ತು ಕುಟುಂಬದ ಮೇಲೆ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರ್ವೇಗಳನ್ನು ಗಮನಿಸುವುದಾದರೆ 16-17 ವರ್ಷದ ಹದಿಹರೆಯದ ಹುಡುಗ ಮತ್ತು ಹುಡುಗಿಯರು ಹೆಚ್ಚಾಗಿ ಮಾದಕ ವಸ್ತುಗಳ ಚಟಕ್ಕೆ ಒಳಗಾಗಿರುವುದು ಕಂಡುಬರುತ್ತದೆ. ಇದು ಆ ಮಕ್ಕಳ ಭವಿಷ್ಯಕ್ಕೆ ಮಾರಕ ಎಂದು ಎಚ್ಚರಿಸಿದರು.
ಜನರು ಯಾವುದೂ ಒಂದು ಸಣ್ಣ ಕಾರಣಕ್ಕಾಗಿ ಮಾದಕ ವಸ್ತುಗಳನ್ನು ಸೇವಿಸಲು ಶುರುಮಾಡಿ ನಂತರ ಅದಕ್ಕೆ ದಾಸರಾಗುತ್ತಾರೆ. ಮುಂದೆ ಹವ್ಯಾಸ ಬಿಡಬೇಕೆಂದರೂ ಅದು ಕಷ್ಟಸಾಧ್ಯ ಮತ್ತು ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಯುವ ಪೀಳಿಗೆಯ ಜನರು ಜೀವಕ್ಕೆ ಮಾರಕವಾಗುವ ಹವ್ಯಾಸವನ್ನೇ ಬಿಡಬೇಕು ಎಂದು ಸಲಹೆ ನೀಡಿದರು.
ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜನರಿಗೆ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಸುತ್ತ ಮುತ್ತಲಿನ ಜನರಿಗೂ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಪ್ರತಿನಿತ್ಯ ಹಲವಾರು ಮಾಧ್ಯಮಗಳಲ್ಲಿ ಬಹಳಷ್ಟು ವಿಷಯಗಳನ್ನು ನೋಡುತ್ತೇವೆ. ನಾಗರಿಕ ಸಮಾಜದಲ್ಲಿನ ಕಟ್ಟುಪಾಡುಗಳನ್ನು ಮೀರಿ ಇತ್ತೀಚಿನ ದಿನಗಳಲ್ಲಿ ನಾಗರೀಕರು ವರ್ತಿಸುತ್ತಿದ್ದಾರೆ. ಇದಕ್ಕೆ ಕಾರಣ ಆಲ್ಕೋಹಾಲ್, ಗುಟ್ಕಾ, ತಂಬಾಕು ಇನ್ನಿತರ ಮಾದಕ ವಸ್ತುಗಳ ಸೇವನೆಗೆ ದಾಸರಾಗಿರುವುದು ಎಂದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳಾದ ಡಾ.ಬೃಂದಾ ಮಾತನಾಡಿ ಮಾದಕ ವ್ಯಸನ ಎಂಬುದು ಒಂದು ಸಾಮಾಜಿಕ ಪಿಡುಗಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಮೇಲೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪ್ರಭಾವ ಬೀರಿ ಮನುಷ್ಯನನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಕುಗ್ಗುವಂತೆ ಮಾಡುತ್ತದೆ. ಆದ್ದರಿಂದ ಮಾದಕ ವಸ್ತುಗಳ ಸೇವನೆಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು. ಕರ್ನಾಟಕದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಬಹುಪಾಲು ಜನರು ಮಾದಕ ವ್ಯಸನಿಗಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಸೇವಿಸಿ ಮಾನಸಿಕ ಕಿನ್ನತೆಗೆ ಒಳಗಾಗುತ್ತಿರುವುದನ್ನು ಕಾಣಬಹುದು ಇಂತಹವರಿಗೆ ಮಾದಕ ವಸ್ತುಗಳ ಸೇವನೆಯ ಬಗ್ಗೆ ಮಾಹಿತಿ ನೀಡಿ ಅವುಗಳ ನಿರ್ಮೂಲನೆಯತ್ತ ಗಮನ ನೀಡಬೇಕು ಎಂದರು.
ಜನರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಡ್ರಗ್ಸ್ ಬಳಕೆ ದುರುಪಯೋಗ ಹಾಗೂ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಮಾದಕ ವ್ಯಸನವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಮಾಡಲಾಗುವುದು ಎಂದರು.
ವ್ಯಸನವು ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಮೆದುಳಿನ ಅಸ್ವಸ್ಥತೆಯಾಗಿದ್ದು, ಇದರ ಮೇಲೆ ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಪ್ರಭಾವ ಬೀರುತ್ತದೆ. ವ್ಯಸನ ಶುರುವಾಗುವುದು ಕುತೂಹಲ, ಸ್ನೇಹಿರತ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ ಸರಿ ಇಲ್ಲದ ಕಾರಣ ಕಲಹ ಕಷ್ಟಗಳು, ಮನೆಯವರ ವಿರುದ್ಧ ಸಿಡಿದೇಳುವ ಕೃತ್ಯ ಗಳಿಂದ ವ್ಯಸನಕ್ಕೆ ತುತ್ತಾಗುತ್ತಾರೆ ಎಂದು ತಿಳಿಸಿದರು.
ವ್ಯಸನಕ್ಕೆ ಒಳಗಾದವರು ಮಾದಕ ವ್ಯಸನದ ಕುರಿತು ವೈದ್ಯರಿಂದ ವಿವರವಾಗಿ ತಿಳಿದುಕೊಳ್ಳಬೇಕು. ಹತ್ತಿರದ ಮನೋವೈದ್ಯದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬೇಕು. ವ್ಯಸನಿಗಳು ತಮ್ಮ ತೊಂದರೆಗಳನ್ನು ನಿರ್ಲಕ್ಷಿಸಬಾರದು. ವ್ಯಸನಿಗಳ ಸಂಬಂಧಿಕರು ಕುಟುಂಬದವರು ಅವರನ್ನು ದೂಷಿಸಬಾರದು ಎಂದರು.
ಕಾರ್ಯಕ್ರಮದಲ್ಲಿ ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್, ಮನೋರೋಗ ತಜ್ಞೆ ಡಾ.ಮಾಲಿನಿ, ಲಷ್ಕರ್ ಮೊಹಲ್ಲಾದ ಸಬ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್, ಎನ್‍ಎಸ್‍ಎಸ್‍ನ ಸಂಚಾಲಕರು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.