ನಾಲೆಗಳಿಗೆ ನೀರು ಬಿಡಲು ಒತ್ತಾಯಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು.ಜು.07:- ಕಬಿನಿ ವ್ಯಾಪ್ತಿಯ ನಾಲೆಗಳು ಮತ್ತು ಕೆರೆಕಟ್ಟೆಗಳಿಗೆ ನೀರು ಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಡಾ ಕಚೇರಿ ಎದುರು ಜಮಾವಣೆಗೊಂಡ ರೈತರು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಬಿನಿ ಡ್ಯಾಮ್, ಸಂಪೂರ್ಣವಾಗಿ ಭರ್ತಿಯಾಗುವ ಹಂತದಲ್ಲಿದ್ದು ನಾಲೆಗಳಿಗೆ ನೀರು ಬಿಡಲು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಸದರು, ಕಾಡಾ ಅಧಿಕಾರಿಗಳು ಯಾಕೆ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಳೆದ ವರ್ಷದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ಕಬಿನಿ ಅಚ್ಚುಕಟ್ಟು ಭಾಗದ ರೈತರನ್ನು ಬರಪೀಡಿತ ಪ್ರದೇಶದಂತೆ ನಿರ್ಮಾಣ ಮಾಡಿದ್ದಾರೆ. ಜೀವನೋಪಾಯಕ್ಕೆ ಅಲ್ಪಸ್ವಲ್ಪ ಭತ್ತ, ರಾಗಿ, ಜಾನುವಾರುಗಳಿಗೆ ಮೇವು ಬೆಳೆದುಕೊಂಡು ಕೃಷಿ, ಕೂಲಿ ಕಾರ್ಮಿಕರಿಗೆ ಕೆಲಸ ಕೊಟ್ಟು ಜೀವನೋಪಾಯ ನಡೆಸಿಕೊಳ್ಳಲು ಕಾದಿದ್ದ ಕಬಿನಿ ಅಚ್ಚುಕಟ್ಟು ಭಾಗದ ರೈತರಿಗೆ ಬೆನ್ನಿನ ಮೇಲೆ ಬರೆ ಎಳೆದಿದ್ದಾರೆ. ಕಾವೇರಿ ನ್ಯಾಯಾಧೀಕರಣ ಪ್ರಾಧಿಕಾರದ ಆದೇಶವನ್ನು ಪಾಲಿಸಿ ಈ ಭಾಗದ ರೈತರಿಗೆ ದ್ರೋಹ ಮಾಡಿ ಸರ್ಕಾರ ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಯುತ್ತಿದೆ ಎಂದು ದೂರಿದರು.
ಕೆರೆಕಟ್ಟೆಗಳಿಗೆ ನೀರು ತುಂಬಿಸುತ್ತೇವೆ ಎಂದು ಹೇಳಿ ಅಚ್ಚುಕಟ್ಟು ಭಾಗದ ವ್ಯವಸಾಯಕ್ಕೆ ಕಟ್ಟು ನೀರನ್ನು ಹರಿಸುತ್ತೇವೆ ಎಂಬ ಕರ ಪತ್ರ ಹಂಚಲು ನೀರಾವರಿ ಇಲಾಖೆ ಅಧಿಕಾರಿಗಳು ತಂತ್ರಗಾರಿಕೆ ನಡೆಸುತ್ತಾರೆ. ಈ ರೀತಿಯ ಕರಪತ್ರವೇನಾದರೂ ತೆಗೆದುಕೊಂಡು ಗ್ರಾಮಕ್ಕೆ ಬಂದರೆ ಅಧಿಕಾರಿಯನ್ನು ಬಾರ್ಕೋಲ್ ಚಳುವಳಿಯ ಮುಖಾಂತರ ಪ್ರಶ್ನಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಪ್ರತಿಭಟನಾಕಾರರು ಕಾಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಕಾಡಾ ಎಂಜಿನಿಯರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜು.10ರಿಂದ ಕೆರೆಕಟ್ಟೆ ಮತ್ತು ನಾಲೆಗಳಿಗೆ ನೀರು ಬಿಡುತ್ತೇವೆ ಎಂದು ಬರವಣಿಗೆ ನೀಡಿದ ನಂತರ ಚಳವಳಿಯನ್ನು ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ರಾಜ್ಯ ಪ್ರದಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.