ಸಿಎಂ ವಿರುದ್ಧ ದ್ವೇಷದ ರಾಜಕಾರಣ
ಸಂಜೆವಾಣಿ ನ್ಯೂಸ್
ಮೈಸೂರು.ಜು.07:- ಮುಡಾ ಹಗರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ. ಆದರೆ, ದ್ವೇಷದ ರಾಜಕಾರಣದಿಂದ ಅವರ ಹೆಸರನ್ನು ಮುನ್ನಲೆಗೆ ತರಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಸ್ಪಷ್ಟನೆ ನೀಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ 3 ಎಕರೆ 16 ಗುಂಟೆ ಅಂದರೆ 1,50,000 ಚದರ ಅಡಿ ಜಾಗ ಅವರ ಹೆಸರಿನಲ್ಲಿತ್ತು. 38,000 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಮುಡಾ ಮಂಜೂರು ಮಾಡಿದೆ. ಇದೂ ಕೂಡ ಮುಡಾ ನಿಯಮದ ಅನ್ವಯ ಮಂಜೂರು ಮಾಡಿದೆ. 2021 ರಲ್ಲಿ ನಿವೇಶನ ಪಡೆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರಲಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆಯಲ್ಲ. ಆದ ಕಾರಣ ಮುಖ್ಯಮಂತ್ರಿ ಅಧಿಕಾರ ದುರುಪಯೋಗದ ಪ್ರಶ್ನೆ ಉದ್ಭವಿಸುವುದಿಲ್ಲ. ಮುಖ್ಯಮಂತ್ರಿ ಪತ್ನಿ ಎಂಬ ಕಾರಣಕ್ಕೆ ಬಹಳ ಚರ್ಚೆಯಾಗುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯನವರಿಗೂ ಈ ಪ್ರಕರಣಕ್ಕೂ ಸಂಬಂಧವಿರುವುದಿಲ್ಲ. ಸಿದ್ದರಾಮಯ್ಯ ಕುಟುಂಬ ಅಣ್ಣ, ತಮ್ಮ ಅಥವಾ ಯಾರೂ ಭಾಗಿಯಿಲ್ಲ ಇದೂ ಸಿದ್ದರಾಮಯ್ಯನವರ ಮಾವನ ಕುಟುಂಬಕ್ಕೆ ಸಂಬಂಧಿಸಿದ ವಿಚಾರ. 2004ರಲ್ಲಿ ಪಾರ್ವತಿ ಸಿದ್ದರಾಮಯ್ಯನವರ ಅಣ್ಣನಾದ ಮಲ್ಲಿಕಾರ್ಜುನ್ ಖರೀದಿ ಮಾಡಿದ್ದಾರೆ. 2010ರಲ್ಲಿ ಸಹೋದರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪಾರ್ವತಿ ಸಿದ್ದರಾಮಯ್ಯನವರು ಬಂಡವಾಳ ಹೂಡಿ ಖರೀದಿ ಮಾಡಿರುವುದಿಲ್ಲ ಅಥವಾ ಸಿದ್ದರಾಮಯ್ಯ ಅವರಾಗಲಿ ಅವರ ಕುಟುಂಬವಾಗಲಿ ಹಣ ಕೊಟ್ಟು ಖರೀದಿಸಿದ್ದಲ್ಲ. ಹೀಗಾಗಿ ಸಿದ್ದರಾಮಯ್ಯನವರಿಗೆ ಈ ಪ್ರಕರಣ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದರು.
ಪರಿಹಾರದ ಬದಲಾಗಿ ನಿವೇಶನ ನೀಡುವಂತೆ ಪಾರ್ವತಿ ಸಿದ್ದರಾಮಯ್ಯನವರು ಮುಡಾಗೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿ 38,000 ಚದರ ಅಡಿ ಭೂಮಿಯನ್ನು ಮುಡಾದಿಂದ ನೀಡಲಾಗಿದೆ. ಕಾನೂನು ಬದ್ಧ ಸಂಸ್ಥೆಯಾದ ಮುಡಾದ ಆಯುಕ್ತರು ಪ್ರಾಧಿಕಾರದ ತೀರ್ಮಾನದಂತೆ ಕಾನೂನಿನ ಅಡಿಯಲ್ಲಿ ನಿವೇಶನ ಮಂಜೂರು ಮಾಡಿರುತ್ತಾರೆ. ಎಲ್ಲವೂ ಕಾನೂನಿನ ಪ್ರಕಾರವೇ ನಡೆದಿದೆ. ಒಬ್ಬ ಜನನಾಯಕ ಮುಖ್ಯಮಂತ್ರಿಯನ್ನು ಇಲ್ಲಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನಿಸಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ ಎಂದರು.