ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಪುಣ್ಯಸ್ಮರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.07: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.
ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ರ್ಪಾಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಮುಖಂಡ ಬಿ.ಬಿ.ಕಾಂತರಾಜು ದಕ್ಷ ಆಡಳಿಗಾರರಾಗಿ ಜಗಜೀವನರಾಂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಇತಿಹಾಸ ಪುರುಷರನ್ನು ಮಾತ್ರ ದೇಶ ಸ್ಮರಣೆ ಮಾಡುತ್ತದೆ. ಸಮಸ್ತ ಭಾರತೀಯರು ಇಂದು ಜಗಜೀವನರಾಂ ಅವರ ಪುಣ್ಯಸ್ಮರಣೆ ಮಾಡುವ ಮೂಲಕ ಜಗಜೀವಬನರಾಂ ಅವರನ್ನು ಇತಿಹಾಸ ಪುರುಷರ ಸಾಲಿಗೆ ಸೇರಿಸಿದ್ದಾರೆ. ಜಾತಿ, ಮತ, ಪಂಥ ಹಾಗೂ ಧರ್ಮಗಳನ್ನು ಮೀರಿದ್ದು ಭಾರತೀಯತೆ. ಸಮಾಜದ ಅತ್ಯಂತ ಕೆಳಸ್ತರದ ಸಮುದಾಯದಲ್ಲಿ ಜನಿಸಿದ ಬಾಬು ಜಗಜೀವನರಾಂ ತಮ್ಮ ಅಪ್ರತಿಮ ದೇಶ ಸೇವೆಯ ಮೂಲಕ ಭಾರತೀಯ ಇತಿಹಾಸದ ಪುಟಗಳಲ್ಲಿ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆಂದರು.
ಜಗಜೀವನರಾಂ ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಪಟ್ಟ ಶಿಷ್ಯ. 1946 ರಲ್ಲಿ ದೇಶಕ್ಕೆ ಸ್ವಾತ್ಯಂತ್ರ ಬರುವ ಮುನ್ನವೇ ರಚಿತವಾಗಿದ್ದ ಮೊದಲ ಸಚಿವ ಸಂಪುಟದಲ್ಲಿಯೇ ದೇಶದ ಕಾರ್ಮಿಕ ಸಚಿವರಾಗಿದ್ದರು. ಸಂವಿಧಾನಿಕ ಹಕ್ಕುಗಳನ್ನು ಕಾರ್ಮಿಕರಿಗೆ ನೀಡುವಲ್ಲಿ ಜಗಜೀವನರಾಂ ಅವರ ಕೊಡುಗೆಯಿದೆ ಎಂದ ಕಾಂತರಾಜು 1956 ರಲ್ಲಿ ದೇಶದ ರೈಲ್ವೆ ಸಚಿವರಾಗಿ ದೇಶದ ರೈಲ್ವೆ ಅಭಿವೃದ್ದಿಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ದೇಶದ ಆಹಾರ ಭದ್ರತೆಯಲ್ಲಿ ಜಗಜೀವನರಾಂ ಅವರ ಕೊಡುಗೆಯಿದೆ. ದೊಡ್ಡ ದೊಡ್ಡ ಅಣೆಕಟ್ಟೆಗಳನ್ನು ನಿರ್ಮಿಸಿ ನೀರಾವರಿ ಪ್ರದೇಶಗಳನ್ನು ವಿಸ್ತರಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದು ಬಿಂಬಿಸಲ್ಪಟ್ಟಿರುವ ಜಗಜೀವನರಾಂ ಅಪ್ಪಟ ಕಾಂಗ್ರೆಸ್ಸಿಗರಾಗಿದ್ದರೂ ಅಧಿಕಾರಕ್ಕಾಗಿ ತಮ್ಮ ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟವರಲ್ಲ. ಇಂದಿರಾ ಗಾಂಧಿಯವರೊಂದಿಗೆ ಮೂಡಿದ ಸೈದ್ದಾಂತಿಕ ಭಿನ್ನಭಿಪ್ರಾಯಗಳಿಂದಾಗಿ ಕಾಂಗ್ರೆಸ್ ತ್ಯಜಿಸಿದ ಜಗಜೀವನರಾಂ ದೇಶದಲ್ಲಿ ಮೊಟ್ಟ ಮೊದಲ ಭಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದರು. ದೇಶದಲ್ಲಿ ಜೀವಂತವಿರುವ ಜಾತಿ ವ್ಯವಸ್ಥೆ ಎಲ್ಲಾ ಅರ್ಹತೆಗಳಿದ್ದರೂ ಜಗಜೀವನರಂ ಅವರನ್ನು ದೇಶದ ಪ್ರಧಾನಿಯಾಗಲು ಬಿಡಲಿಲ್ಲ. ಮೊಟ್ಟಮೊದಲ ಕಾಂಗ್ರೆಸ್ಸೇತರ ಜನತಾ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ಜನಪರ ಕೆಲಸ ಮಡಿದ ಬಾಬೂಜಿ ದೇಶದ ಎಲ್ಲಾ ಶೋಪಿತ ಸಮುದಾಯಗಳಿಗೂ ಧ್ವನಿಯಾಗಿ ನಿಂತಿದ್ದಾರೆಂದರು.
ತಹಸೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಹಣಧಿಕಾರಿ ಬಿ.ಎಸ್.ಸತೀಶ್, ಶಿಕ್ಷಣ ಇಲಾಖೆಯ ನೀಲಾಮಣಿ, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್,ಬಿಸಿಎಂ ಅಧಿಕಾರಿ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು