100 ಕೋಟಿ ವಿಶೇಷ ಪ್ಯಾಕೇಜ್ ನೀಡಲು ನಗರಾಭಿವೃದ್ದಿ ಸಚಿವರಿಗೆ ಬಿಜೆಪಿ ನಗರ ಘಟಕ ಮನವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 6- ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಚಾಮರಾಜನಗರ ನಗರಸಭೆಗೆ ನೂರು ಕೋಟಿ ರೂಗಳ. ವಿಶೇಷ ಅನುದಾನ ನೀಡಬೇಕೆಂದು ಬಿಜೆಪಿ ನಗರ ಘಟಕದಿಂದ ನಗರಸಭಾ ಸದಸ್ಯರು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ ಅವರಿಗೆ ಮನವಿ ಸಲ್ಲಿಸಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಚಿವರನ್ನು ಭೇಟಿ ಮಾಡಿದ ನಗರಸಭಾ ಸದಸ್ಯರಾದ ನಗರ ಮಂಡಲದ ಅಧ್ಯಕ್ಷ ಶಿವರಾಜು, ಮನೋಜ್ ಪಟೇಲ್, ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ನಟರಾಜು, ಮುಖಂಡರಾದ ಎಸ್. ಬಾಲಸುಬ್ರಮಣ್ಯ ಹಾಗೂ ಇತರರು ಮನವಿ ಸಲ್ಲಿಸಿ, ಗಡಿ ಜಿಲ್ಲಾ ಕೇಂದ್ರದ ಅಭಿವೃದ್ದಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅಧ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ನಗರೋತ್ಥಾನದಲ್ಲಿ ಬಿಡುಗಡೆಯಾಗಿರುವ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಮತ್ತು ಪ್ರಾರಂಭವಾಗಿರುವ ಕಾಮಗಾರಿಗಳು ಕೂಡ ಕಳಪೆಯಾಗಿರುತ್ತದೆ. ಇದರ ಬಗ್ಗೆ ಕೂಡಲೇ ಗಮನ ವಹಸಬೇಕು. ನಗರೋತ್ಥಾನ ಯೋಜನೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಲ್ಯಾಬ್ ಟ್ಯಾಪ್, ಮಹಿಳೆಯರಿಗೆ ಹೊಲಿಗೆ ಯಂತ್ರಗಳಿಗೆ ಅನುದಾನಗಳಿಗೆ ಟೆಂಡರ್ ಕರೆಯದೇ ವಿಳಂಬ ಮಾಡುತ್ತಿದ್ದು ತಾವು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ 10 ತಿಂಗಳ ಹಿಂದೆಯೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಅವಧಿಯು ಮುಕ್ತಾಯವಾಗಿದ್ದು, ಹೊಸ ಮೀಸಲಾತಿ ಪ್ರಕಟಿಸಬೇಕಾಗಿತ್ತು. ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಇದರಿಂದಾಗಿ ಸ್ಥಳೀಯ ನಗರದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯವು ಕುಂಠಿತವಾಗಿದೆ. ಸ್ಥಳೀಯ ಆಡಳಿತಗಳಲ್ಲಿ ಕೆಲಸ ಕಾರ್ಯಗಳು ಕುಂಠಿತವಾಗಿದೆ. ಆದ್ದರಿಂದ ಅವಧಿ ಮುಗಿದಿರುವ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನಗರಸಭೆ, ಪುರಸಭೆಗಳಿಗೆ ಈ ಕೂಡಲೇ ಮೀಸಲಾತಿಯನ್ನು ಪ್ರಕಟಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.