ಕಕ್ಷಿದಾರನ ಮನೆ ಬಾಗಿಲಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಮುಖ್ಯ ಉದ್ದೇಶ :ಹೈಕೋರ್ಟ್ ನ್ಯಾಯಮೂರ್ತಿ ಕೆ ಎಸ್ ಮುದುಗಲ್
ಅಥಣಿ :ಜು.7: ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಅಥಣಿ ತಾಲೂಕಿನ ಕೊನೆಯ ಗ್ರಾಮ 200 ಕಿಲೋ ಮೀಟರ್ ದೂರದಲ್ಲಿದೆ ಇಂತಹ ಗ್ರಾಮಗಳ ಗ್ರಾಮಸ್ಥರಿಗೆ ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗಿರುವುದು ನ್ಯಾಯದಾನ ವ್ಯವಸ್ಥೆಯಲ್ಲಿ ಅನಕೂಲವಾಗಲಿದೆ ಕಕ್ಷಿದಾರನ ಮನೆ ಬಾಗಿಲಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ ಎಸ್ ಮುದುಗಲ್ ಹೇಳಿದರು.
ಅವರು ಪಟ್ಟಣದಲ್ಲಿ ಶನಿವಾರ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠವನ್ನು ಉದ್ಘಾಟಿಸಿ ಮಾತನಾಡಿದರು.
ಚಿಕ್ಕೋಡಿ ಜಿಲ್ಲಾ ನ್ಯಾಯಾಲಯದಿಂದ ಅಥಣಿ ಜಿಲ್ಲಾ ನ್ಯಾಯಾಲಯಕ್ಕೆ 664 ಪ್ರಕರಣಗಳು ವರ್ಗಗೊಂಡಿದ್ದು, ಇದರಲ್ಲಿ ಒಂದು ಪ್ರಕರಣ 15 ವರ್ಷಗಳ ಹಳೆಯದ್ದಾಗಿದೆ ಇದೇ ರೀತಿ ಇನ್ನೂ ಕೆಲವು ಪ್ರಕರಣಗಳು 10 ವರ್ಷಗಳಿಂದ ಹಿಡಿದು 5 ವರ್ಷಗಳ ಹಳೆಯ ಪ್ರಕರಣಗಳಿದ್ದು, ಇಂತಹ ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಅಥವಾ ನಿಗದಿತ ಸಮಯದಲ್ಲಿ ಇತ್ಯರ್ಥಗೊಳಿಸುವ ಜವಾಬ್ದಾರಿ ಅಥಣಿ ನ್ಯಾಯವಾದಿಗಳ ಮೇಲಿದೆ ಎಂದರು.
ಕಳೆದ ಕೆಲವು ವರ್ಷಗಳಿಂದ ಇನ್ನು ನಿರ್ಣಯವಾಗದ ಪ್ರಕರಣಗಳು ಬಾಕಿ ಇರುವುದರಿಂದ ಇದಕ್ಕೆ ಸೂಕ್ತವಾದ ಕಾರಣವನ್ನು ಹುಡುಕಿ ಪರಿಹಾರ ರೂಪಿಸುವುದು ಅಗತ್ಯವಾಗಿದೆ. ಬಾಕಿ ಇರುವ ಪ್ರಕರಣಗಳು ಕೂಡಲೇ ಇತ್ಯರ್ಥವಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಜಿಲ್ಲಾ ನ್ಯಾಯಾಲಯ ಸ್ಥಾಪನೆಯ ಮೂಲಕ ನ್ಯಾಯದೇವತೆ ಇಲ್ಲಿ ಆಗಮಿಸಿದ್ದು, ಪ್ರತಿಯೊಬ್ಬರ ಮನೆಯ ಬಾಗಿಲಿಗೆ ನ್ಯಾಯ ಒದಗಿಸುವ ಕಾರ್ಯವನ್ನು ವಕೀಲರು ಮಾಡಬೇಕು. ಶಿಕ್ಷಕ, ವೈದ್ಯ ಮತ್ತು ನ್ಯಾಯಮಾದಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ವಕೀಲರು ಕಾನೂನನ್ನು ಹೆಚ್ಚಿಗೆ ಅಧ್ಯಯನ ಮಾಡುವ ಕೌಶಲ್ಯ ರೂಡಿಸಿಕೊಳ್ಳಬೇಕು. ಒಳ್ಳೆಯ ನ್ಯಾಯವಾದಿ ಎನಿಸಿಕೊಳ್ಳಬೇಕಾದರೆ ಮುಕ್ತ ನ್ಯಾಯಾಲಯ ಪ್ರಕರಣಗಳಲ್ಲಿ ಭಾಗಿಯಾಗಬೇಕು. ಲೋಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳು ದಾಖಲಾಗುವ ಮೊದಲೇ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಹೇಮಲೇಖಾ ಮಾತನಾಡಿ, ಅಥಣಿ ನ್ಯಾಯವಾದಿಗಳು ನಿಸ್ವಾರ್ಥದಿಂದ ಕಕ್ಷಿದಾರರಿಗೆ ಕಾನೂನು ಸೇವೆ ಒದಗಿಸುವ ಮೂಲಕ ಜಿಲ್ಲಾ ನ್ಯಾಯಾಲಯದ ಮಹತ್ವ ಹೆಚ್ಚಿಸಬೇಕು, ಅಥಣಿ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯವಾದಿಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದ ಅವರು ಅಥಣಿಗೆ ಜಿಲ್ಲಾ ನ್ಯಾಯಾಲಯ ಪ್ರಾರಂಭಗೊಂಡಿರುವುದಕ್ಕೆ ತಮ್ಮೆಲ್ಲರನ್ನು ಅಭಿನಂದಿಸುವೆ ಎಂದರು.
ಈ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ ಮಾತನಾಡಿ ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೊಂಡಿರುವುದರಿಂದ ನ್ಯಾಯವಾದಿಗಳ ಜವಾಬ್ದಾರಿ ಹೆಚ್ಚಾಗಿದೆ. ಬಾಕಿ ಇರುವ ಪ್ರಕರಣಗಳಿಗೆ ಬೇಗನೆ ನ್ಯಾಯ ನಿರ್ಣಯ ಕೈಕೊಂಡರೆ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗಲಿದೆ. ಕಿರಿಯ ವಕೀಲರು ಹಿರಿಯ ವಕೀಲರಿಗೆ ಗೌರವ ಕೊಡುವುದನ್ನು ರೂಡಿಸಿಕೊಳ್ಳಬೇಕು. ಒಬ್ಬ ಒಳ್ಳೆಯ ವಕೀಲನಾಗಬೇಕಾದರೆ ತಾಳ್ಮೆ ಮತ್ತು ನಿರಂತರ ಕೌಶಲ್ಯವನ್ನು ರೂಪಿಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ರಾಜ್ಯ ಸರ್ಕಾರ ತಾಲೂಕಾ ಕೇಂದ್ರಗಳಲ್ಲಿ ಕೋರ್ಟ್ ಸ್ಥಾಪನೆ ಮಾಡಿದರೆ ಸಾಲದು, ನ್ಯಾಯಾಧೀಶರಿಗೆ ಮತ್ತು ನ್ಯಾಯ ಪೀಠಕ್ಕೆ ಬೇಕಾಗುವ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಒಂದು ನ್ಯಾಯಾಲಯ ನಡೆಸಬೇಕಾದರೆ 40 ಜನ ಸಿಬ್ಬಂದಿಗಳು ಬೇಕಾಗುತ್ತಾರೆ. ಸಿಬ್ಬಂದಿಗಳ ಕೊರತೆಯಿಂದಲೇ ಅನೇಕ ವರ್ಷಗಳಿಂದ ಇನ್ನೂ ಕೆಲವು ಪ್ರಕರಣಗಳಿಗೆ ನ್ಯಾಯದಾನ ದೊರಕುತ್ತಿಲ್ಲ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ ಪಾಟೀಲ ಮಾತನಾಡಿ ನ್ಯಾಯದಾನ ವ್ಯವಸ್ಥೆಯಲ್ಲಿ ಸಾಕ್ಷಿದಾರನಿಗೆ ಗೌರವ ಸಿಗುತ್ತಿಲ್ಲ. ಜನಸಾಮಾನ್ಯರಿಗೂ ನ್ಯಾಯಾಲಯದಲ್ಲಿ ಗೌರವ ದೊರಕಬೇಕು. ಬಾಕಿ ಇರುವ ಪ್ರಕರಣಗಳನ್ನು ಬರುವ 6 ತಿಂಗಳಲ್ಲಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ವಕೀಲರ ಚೇoಬರ್ ಸ್ಥಾಪನೆ ಮಾಡಲಾಗಿದ್ದು, ಅದೇ ಮಾದರಿಯಲ್ಲಿ ತಾಲೂಕಾ ಮಟ್ಟದಲ್ಲಿಯೂ ಕೂಡ ವಕೀಲರ ಚೇoಬರ್ ನಿರ್ಮಿಸಲಾಗುವುದು ಎಂದು ಹೇಳಿದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ ಎನ್ ಇನವಳ್ಳಿ, ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್ ಹುಚಗೌಡರ, ಚಿಕ್ಕೋಡಿ ಲೋಕಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರು ಸುನೀಲ ಕುಮಾರ ಬಳೋಲ ನ್ಯಾಯವಾದಿಗಳಾದ ಕೆ ಎ ವನಜೋಳ. ಸುನೀಲ ಸಂಕ. ಮಿತೀಶ ಪಟ್ಟಣ. ಬಿ ಬಿ ಬಿಸಲಾಪೂರ. ಎಮ್ ಸಿ ದುಂಡಿ. ಆರ್ ಎನ್ ಕುಲ್ಲೋಳಿ. ಸೇರಿದಂತೆ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ಪೆÇಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಬಿ ಎಲ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನ್ಯಾಯಮೂರ್ತಿ ಟಿ. ಎನ್ ಇನವಳ್ಳಿ ಸ್ವಾಗತಿಸಿದರು. ನ್ಯಾಯವಾದಿ ಬಾಹುಸಾಹೇಬ ಕಾಂಬಳೆ, ಡಿ ಬಿ ಟಕ್ಕಣ್ಣವರ, ಸುಭಾಸ ನಾಯಿಕ ನಿರೂಪಿಸಿದರು. ಎ ಎಸ್ ಹುಚ್ಚಗೌಡರ ವಂದಿಸಿದರು.
ಅಥಣಿ ನ್ಯಾಯಾಲಯಕ್ಕೆ ಶತಮಾನದ ಇತಿಹಾಸವಿದ್ದು, ಭೌಗೋಳಿಕವಾಗಿ ವಿಸ್ತಾರ ಹೊಂದಿದ್ದು, ಬೆಳಗಾವಿ ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ಅಥಣಿ ಮುರುಘೇಂದ್ರ ಶಿವಯೋಗಿಗಳಂತಹ ಮಹಾ ಸತ್ಪುರುಷರ ಪುಣ್ಯ ಪಾವನ ಕ್ಷೇತ್ರವಾಗಿದೆ. ಇಲ್ಲಿ ಸ್ಥಾಪನೆಯಾಗಿರುವ ಜಿಲ್ಲಾ ನ್ಯಾಯಾಲಯ ಪೀಠದ ಸದುಪಯೋಗ ಪಡೆದುಕೊಂಡು ಬಾಕಿ ಇರುವ ಪ್ರಕರಣಗಳಿಗೆ ಬೇಗನೆ ನಿರ್ಣಯ ಕೈಗೊಳ್ಳಬೇಕು
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಎಲ್ಲ ಸಲಹೆಗಳನ್ನು ಪರಿಗಣಿಸಲು ಸರಕಾರ ಸಿದ್ಧವಿದೆ ಆದರೆ ಸಾಮಾನ್ಯ ಜನರಿಗೆ ನಿಗದಿತ ಸಮಯದಲ್ಲಿಯೇ ನ್ಯಾಯದಾನ ಸಿಗಬೇಕು ಇಲ್ಲದೇ ಹೋದಲ್ಲಿ ಜನ ಸಾಮಾನ್ಯರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ವ್ಯಾಜ್ಯ ಮುಕ್ತ ಗ್ರಾಮ ಕಾನೂನು ವ್ಯವಸ್ಥೆ ರೂಢಿಯಲ್ಲಿ ಬಂದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ.ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಲು ವಕೀಲರಿಂದ ಸಹಕಾರ ಬೇಕು ಹಾಗೂ ಬೆಂಬಲ ಬೇಕು.
ನ್ಯಾಯ ನಿರ್ಣಯವಾಗಿದ್ದರೂ ಕೂಡ ಕಂದಾಯ ಇಲಾಖೆಯಿಂದ ಅನುಷ್ಠಾನವಾಗದೆ ಇರುವ ವರದಿಗಳ ಬಗ್ಗೆ ಕೂಡಲೇ ಗಮನ ಹರಿಸಲಾಗುವುದು