ಆನ್‍ಲೈನ್ ವಂಚನೆಗೆ ಮೋಸ ಹೋಗದೆ ಜಾಗೃತರಾಗಿರಿ:ಅಣ್ಣಿಗೇರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.7: ದೇಶದಲ್ಲಿ ಸೈಬರ್ ಕ್ರೈಂ, ಆನಲೈನ್ ವಂಚನೆ, ಸುಳ್ಳು ಸಂದೇಶ ಕಳಿಸಿ ಜನತೆಗೆ ಮೋಸ ಮಾಡುವ ದೊಡ್ಡ ಜಾಲವಿದ್ದು, ಇಂತಹ ನಯವಂಚಕರಿಂದ ಜಾಗೃತಿ ಮೂಡಿಸುವದಕ್ಕಾಗಿಯೇ ವಿಜಯಪುರ ನಗರ ಶಾಸಕರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನಿರ್ದೇಶನದಂತೆ ರಾಜ್ಯಾದ್ಯಂತ ಸಿದ್ಧಸಿರಿ ಸೌಹಾರ್ದ ಸಹಕಾರಿಯು ಗ್ರಾಹಕರ ಸಭೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಮಹತ್ಕಾರ್ಯ ಮಾಡುತ್ತಿದೆ ಎಂದು ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿ. ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ತಿಳಿಸಿದರು.
ಸಿಂದಗಿ ಪಟ್ಟಣದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿ. ಶಾಖೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿ. ಸಿದ್ಧಸಿರಿಯ ಠೇವಣಿ ರೂ. 3,500 ಕೋಟಿ, ಸಾಲ ಹಾಗೂ ಮುಂಗಡಗಳು ರೂ. 2,400 ಕೋಟಿ, ಶೇರು ಸಂಗ್ರಹ ರೂ.55 ಕೋಟಿ, ದುಡಿಯುವ ಬಂಡವಾಳ ರೂ. 3,600 ಕೋಟಿ ಹೊಂದಿದ್ದು, ರಾಜ್ಯಾದ್ಯಂತ 159 ಶಾಖೆಗಳು, 1080 ಸಿಬ್ಬಂದಿಗಳು, 593 ಪಿಗ್ಮಿ ಸಂಗ್ರಹಕಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾವುದೇ ಬ್ಯಾಂಕ್, ಸೊಸೈಟಿಗಳು, ಸೌಹಾರ್ದಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ಪ್ರತಿ ವ್ಯವಹಾರದ ಬಳಿಕÀ ಪಾಸಬುಕ್‍ದಲ್ಲಿ ಮುದ್ರಿಸಿಕೊಳ್ಳಬೇಕು. ಸಿಬ್ಬಂದಿ ಮುದ್ರಿಸಲು ನಿರಾಕರಿಸಿದರೆ, ತಕ್ಷಣ ಹಿರಿಯ ಅಧಿಕಾರಿಗಳಿಗೆ ದೂರು ನೀಡಬೇಕು. ಪ್ರತಿ ವ್ಯವಹಾರದ ಸಂದೇಶ ಮೊಬೈಲ್ ಬರುವಂತೆ ನೋಡಿಕೊಳ್ಳಬೇಕು. ಠೇವಣಿ ತುಂಬಿದ ತಕ್ಷಣ ಠೇವಣಿ ಪತ್ರ, ರಸೀದಿ ಪಡೆಯಬೇಕು. ಪಿಗ್ಮಿ ಹಣದ ಬಗ್ಗೆಯೂ ಖಚಿತಪಡಿಸಿಕೊಳ್ಳಿ. ಖಾಲಿ ಚೆಕ್, ವಿತ್ ಡ್ರಾ ರಸೀದಿಗಳಲ್ಲಿ ಸಹಿ ಮಾಡಿ ನೀಡಬಾರದು ಎಂದು ಸಲಹೆ ನೀಡಿದರು.
ವಂಚಕರಿಂದ ಆರ್‍ಬಿಐ, ಐಟಿ ಇಲಾಖೆ, ಪೊಲೀಸ್ ಇಲಾಖೆ, ಏರಪೋರ್ಟ ಕಸ್ಟಮ್ ಕಚೇರಿ, ಪಾರ್ಸಲ್ ಆಫೀಸ್ ಎಂದು ಹೇಳಿಕೊಂಡು ಕರೆ ಅಥವಾ ತಮ್ಮ ಮೊಬೈಲ್ ನಂಬರ್ ಲಾಟರಿ ಸ್ಕೀಮ್‍ನಲ್ಲಿ ಆಯ್ಕೆಯಾಗಿದೆ ಎಂದು, ತಮಗೆ ಲಾಟರಿ ಹತ್ತಿದೆ ಎಂದು ಸುಳ್ಳು ಹೇಳಿ ಮುಗ್ದ ಜನತೆಯನ್ನು ವಂಚಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಯಾವುದೇ ಕರೆಗಳಿಗೆ, ವ್ಯಕ್ತಿಗಳಿಗೆ ಕಿವಿಗೊಡದೆ ಜಾಗ್ರತರಾಗಿರಬೇಕು. ಓಟಿಪಿ ಸಂಖ್ಯೆ ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಿದ್ಧಸಿರಿ ಮಹಾ ಪ್ರಬಂಧಕಿ ಉಮಾದೇವಿ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ, ವೆಂಕಟೇಶ ಗುತ್ತೇದಾರ, ಶಫಿ ಅಹಮದ್ ಬಿಜಾಪುರ, ಮುಖ್ಯೋಪಾಧ್ಯಾಯರಾದ ರತ್ನಾಬಾಯಿ ನಾಗಾವಿ, ಜಗದೇವಿ ನಂದಿಕೋಲ, ವಲಯ ಅಧಿಕಾರಿಗಳಾದ ಗುರನಗೌಡ ಬಿರಾದಾರ, ರವಿ ಪಾಟೀಲ, ಸಿದ್ದನಗೌಡ ಬೋರಾವತ, ಧರೆಪ್ಪ ಬಿರಾದಾರ, ಸಂದೀಪ ಗುಡೂರ, ಯೊಗೇಶ ಹಳ್ಳಿ, ಪವನ ಕುಲಕರ್ಣಿ ಮತ್ತಿತÀರರು ಉಪಸ್ಥಿತರಿದ್ದರು.