ಸಂಶೋಧಕರು ಸಂಶೋಧನೆಗೆ ನ್ಯಾಯ ಒದಗಿಸುವ ನೈತಿಕತೆ ಹೊಂದಿರಬೇಕು:ತರಿಕೇರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.7: ಸಂಶೋಧಕರು ಪ್ರತಿಯೊಂದನ್ನು ಬಿಡಿಸಿ ನೋಡುವ, ಎಲ್ಲ ಆಯಾಮಗಳಿಂದ ಆಲೋಚಿಸುವ, ಹಾಗೂ ಚಿಂತಿಸುವ ಸಂಶೋಧನೆಗೆ ನ್ಯಾಯ ಒದಗಿಸುವ ನೈತಿಕತೆ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಹಮತ ತರಿಕೇರಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ. ಜಾ/ ಪ. ಪಂ ನಿರ್ದೇಶನಾಲಯದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಸಂಶೋಧನಾ ವೈಧಾನಿಕತೆ’ ಕಾರ್ಯಾಗಾರದ ಮೂರನೆಯ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಶೋಧನೆಯ ರಚನೆಯಲ್ಲಿ ಪ್ರಸಿದ್ಧ ಸಂಶೋಧಕರ ಸಂಶೋಧನಾ ವೈಧಾನಿಕತೆಯನ್ನು ಅನ್ವಯಿಸಿಕೊಂಡರೆ ಸಂಶೋಧನೆಗೆ, ಸಮಾಜಕ್ಕೆ ನ್ಯಾಯ ಒದಗಿಸಲಾರದು. ಪ್ರತಿ ಸಂಶೋಧನಾ ವಿಷಯದ ವೈಧಾನಿಕತೆ ಭಿನ್ನವಾಗಿರುತ್ತದೆ. ಮಾಹಿತಿಯನ್ನು ಒದಗಿಸುವುದು, ಅಚ್ಚುಕಟ್ಟಾಗಿ ಹೊಂದಿಸುವುದು ಸಂಶೋಧನೆಯಾಗಲಾರದು, ವಿಶ್ಲೇಷಣೆ, ಸೈದ್ಧಾಂತಿಕರಣವನ್ನು ಸಂಶೋಧನೆ ಒಳಗೊಂಡಿರಬೇಕು ಎಂದರು.
ಸಂಶೋಧನಾ ಅಧ್ಯಯನ ಚಿಕ್ಕದಾದಷ್ಟು ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಸಂಶೋಧಕರು ಪತ್ತೆದಾರಿಗಳಂತೆ ಹಗಲಿರುಳು ಬೌದ್ಧಿಕವಾಗಿ, ಭೌತಿಕವಾಗಿ ಕಾರ್ಯನಿರ್ವಹಿಸಬೇಕು. ಪ್ರಭುತ್ವಕ್ಕೆ ಪೂರಕವಾಗಿ, ಮೆಚ್ಚುಗೆಯಾಗುವಂತೆ ಇದ್ದರೆ ಪ್ರಭುತ್ವ ಜನರ ಮೇಲೆ ಕುಣಿಯುತ್ತದೆ. ಆದಕಾರಣ ಸಂಶೋಧಕರು ಹಿಂದಣ ಹೆಜ್ಜೆ ಜೊತೆಗೆ ಮುಂದಣ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ಪ್ರತಿಯೊಂದು ಚಿಂತನೆ, ಸಿದ್ಧಾಂತ, ದೃಷ್ಟಿಕೋನದ ಸಮ್ಮತಿ-ಅಸಮ್ಮತಿಯ ಜೊತೆಗೆ ಸಂಶೋಧಕರು ತಮ್ಮ ಚಿಂತನೆಯನ್ನು ಮಂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಡಾ. ಭಾರತಿ ಗಾಣೀಗೇರ ಮಾತನಾಡಿ, ಸಮಾಜ ವಿಜ್ಞಾನ ಸಂಶೋಧನೆಗಳು ಸಮಾಜ ಅವಿಭಾಜ್ಯ ಅಂಗ. ಸಂಶೋಧಕರಿಗೆ ಸಂಶೋಧನೆಯ ಕುರಿತು ಆಸಕ್ತಿ ಮತ್ತು ಕುತೂಹಲ ಮತ್ತು ಸಮುದಾಯಕ್ಕೆ ಕೊಡುಗೆ ನೀಡುವ ಗುಣ ಇರಬೇಕು ಎಂದರು.
ಗೋಷ್ಠಿಯಲ್ಲಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ಪ.ಜಾ/ಪ.ಪಂಗಡದ ನಿರ್ದೇಶಕಿ ಪ್ರೊ.ಲಕ್ಷ್ಮೀದೇವಿ ವಾಯ್, ಪ್ರೊ. ವಿಷ್ಣು ಸಿಂಧೆ, ಡಾ. ಭಾಗ್ಯಶ್ರೀ ದೊಡಮನಿ, ಡಾ. ಸರೋಜಾ ಸಂತಿ, ಡಾ. ಶಶಿಕಲಾ ರಾಠೋಡ, ಡಾ. ರಜಿಯಾ ನದಾಫ, ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿಗಳಾದ ಪ್ರಿಯಾಂಕಾ ಬನಸೋಡೆ ಹಾಗೂ ಹಸೀನಾ ಸ್ವಾಗತಿಸಿದರು.