ಮಲ್ಲಾಬಾದಿ ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಯಡ್ರಾಮಿ, ಜೇವರ್ಗಿ ಬಂದ್
ಕಲಬುರಗಿ:ಜು.6: ಮಲ್ಲಾಬಾದಿ ಏತ ನೀರಾವರಿ ಯೋಜನೆ ಜಾರಿಗಾಗಿ ಯಡ್ರಾಮಿ ಹಾಗೂ ಜೇವರ್ಗಿ ಸಂಪೂರ್ಣ ಬಂದ್ ಕರೆ ನೀಡಲು ಬಿಳವಾರದಲ್ಲಿ ಇದೇ ಜುಲೈ 16ರಂದು ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ 58 ಗ್ರಾಮಗಳ ರೈತರು ಭಾಗವಹಿಸಿ ಚರ್ಚೆ ಮಾಡಿ ಜೇವರ್ಗಿ ಹಾಗೂ ಯಡ್ರಾಮಿ ಸಂಪೂರ್ಣ ಬಂದ್ ಕರೆ ಕೊಡಲಾಗುವುದು ಎಂದರು.
ಜಿಲ್ಲೆಯ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಮಲ್ಲಾಬಾದಿ ಏತ ನೀರಾವರಿ ಯೋಜನೆ ಸುಮಾರು ದಶಕಗಳು ಕಳೆದರೂ ಕಾಮಗಾರಿಗೆ ಮುಕ್ತಿ ಸಿಕ್ಕಿಲ್ಲ. ಅದಕ್ಕೆ ಶಾಸಕರ ಅಸಹಾಯಕತೆ ಹಾಗೂ ದೌರ್ಬಲ್ಯ ಕಾರಣ ಎಂದು ಡಾ. ಅಜಯಸಿಂಗ್ ಅವರ ವಿರುದ್ಧ ಹರಿಹಾಯ್ದ ಅವರು, ಮಲ್ಲಾಬಾದ್ ಏತ ನೀರಾವರಿಗಾಗಿ ಕಳೆದ ಹತ್ತು ವರ್ಷಗಳ ಹಿಂದೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಕಾರಣ ಮತ್ತೆ ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದರು.
ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಬರುವ ಎಂಬಿಸಿ ಶಾಖಾ ಕಾಲುವೆಯಲ್ಲಿ ಸುಮಾರು 132 ಕೋಟಿ ರೂ.ಗಳು ಕಳೆದ 2023ರ ಮಾರ್ಚ್ 7ರಂದು 138ನೇ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದಾಗ್ಯೂ, ಶೀಘ್ರ ಟೆಂಡರ್ ಕರೆಯಬೇಕು. ಅಲ್ಲದೇ ಜೆಬಿಸಿ ಮೂರು ಕಾಲುವೆಗಳಲ್ಲಿ ಬಳಬಟ್ಟಿ ಲಿಫ್ಟ್ ನಂಬರ್ ಒಂದರಲ್ಲಿ 154 ಕೋಟಿ ರೂ.ಗಳು, ಮಲ್ಲಾಬಾದ್ ಏತ ನೀರಾವರಿಗೆ ಬೇಕಾಗುವ ಒಟ್ಟು 284 ಕೋಟಿ ರೂ.ಗಳನ್ನು ಶಾಸಕರು ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕುಗಳ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಒಟ್ಟು 58 ಗ್ರಾಮಗಳು ಬರುತ್ತವೆ. ಯಡ್ರಾಮಿ ತಾಲ್ಲೂಕಿನಲ್ಲಿ 38 ಗ್ರಾಮಗಳು ಮತ್ತು ಜೇವರ್ಗಿ ತಾಲ್ಲೂಕಿನಲ್ಲಿ 20 ಗ್ರಾಮಗಳು ಒಳಗೊಂಡಿವೆ. ಯೋಜನೆ ಸಂಪೂರ್ಣ ಎರಡೂ ತಾಲ್ಲೂಕುಗಳಿಗೆ ದೊರೆತರೆ ಎಂಬಿಸಿ ವಿಭಾಗದ ರೈತರಿಗೆ ಒಟ್ಟು ನಾಲ್ಕು ಟಿಎಂಸಿ ನೀರು ದೊರೆಯುತ್ತದೆ ಮತ್ತು ಜೆಬಿಸಿ ವಿಭಾಗದ ರೈತರಿಗೆ 2.50 ಟಿಎಂಸಿ ನೀರು ದೊರೆಯುತ್ತದೆ. ಎರಡೂ ವಿಭಾಗಗಳಿಂದ 6.50 ಟಿಎಂಸಿ ನೀರು ರೈತರಿಗೆ ದೊರೆತರೆ ರೈತರ ಆತ್ಮಹತ್ಯೆಯಂತಹ ಪ್ರಕರಣಗಳು ಸಂಭವಿಸುವುದಿಲ್ಲ ಎಂದು ಅವರು ಹೇಳಿದರು.
ಎಂಬಿಸಿ ವಿಭಾಗದಲ್ಲಿ ಒಟ್ಟು 38 ಗ್ರಾಮಗಳಿವೆ. 16,722 ಹೆಕ್ಟೆರ್ ಪ್ರದೇಶ ಬರುತ್ತದೆ. ಜೆಬಿಸಿ ವಿಭಾಗದಲ್ಲಿನ 20 ಗ್ರಾಮಗಳಲ್ಲಿ 8642 ಹೆಕ್ಟೆರ್ ಪ್ರದೇಶವಿದೆ. ಇದು ಎರಡೂ ತಾಲ್ಲೂಕುಗಳ ಜಮೀನಿಗೆ ನೀರುಣಿಸುವ ದೊಡ್ಡ ಯೋಜನೆಯಾಗಿದೆ. ಕಾಮಗಾರಿಯ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಹಾಗೂ ಹೋರಾಟ ಕೈಗೊಂಡರೂ ಸಹ ಯಾವುದೇ ರೀತಿಯಲ್ಲಿ ಪ್ರಯೋಜನ ಆಗಿಲ್ಲ. ಕೂಡಲೇ ಶಾಸಕರು ಎಚ್ಚೆತ್ತು ಟೆಂಡರ್ ಕರೆಯಬೇಕು. ಇಲ್ಲದೇ ಹೋದಲ್ಲಿ ಎರಡೂ ತಾಲ್ಲೂಕುಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷಗೌಡ ಮಾಲಿಪಾಟೀಲ್, ಭೀಮಾಶಂಕರ್ ಕಟ್ಟಿಮನಿ, ಗುರಣ್ಣಗೌಡ ಪಾಟೀಲ್, ಅನುಸೂಯಾಬಾಯಿ ಮುಂತಾದವರು ಉಪಸ್ಥಿತರಿದ್ದರು.