ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ದೇ.ಜವರೇಗೌಡ
ಕಲಬುರಗಿ:ಜು.6:ದೇ.ಜವರೇಗೌಡ ಅವರು ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯಕ್ಕೆ ತಮ್ಮದೇ ಆದ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಅವರು ಮಾಡಿರುವ ಶ್ರಮ ಅವಿಸ್ಮರಣೀಯ. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕøತಿ, ಇತಿಹಾಸ, ಕಾವ್ಯ ಪರಂಪರೆಯಿಂದ ದೇಶದೆಲ್ಲೆಡೆ ಕನ್ನಡ ವಿಜೃಂಭಿಸಬೇಕು ಎಂಬ ಕಳಕಳಿಯಿಂದ ಇಡೀ ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಹೋರಾಟ ಮಾಡಿರುವ ದೇ.ಜ.ಗೌ. ಅವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಿವನಗರದಲ್ಲಿರುವ ‘ಶ್ರೀ ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ದೇ.ಜವರೇಗೌಡ್‍ರ 109ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ದೇ.ಜ.ಗೌ. ಅವರು ಕನ್ನಡದ ಮೇರು ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಕನ್ನಡ ವಿಶ್ವಕೋಶಕ್ಕೆ ಜೀವ ತುಂಬಿದ ಕನ್ನಡದ ಕಟ್ಟಾಳು. ಅನುವಾದ ಕ್ಷೇತ್ರ, ಜಾನಪದ ಸಾಹಿತ್ಯಕ್ಕೂ ಅವರ ಕೊಡುಗೆ ಅಪಾರವಾಗಿದೆ. ಅನೇಕ ಕೃತಿಗಳನ್ನು ರಚಿಸಿದ ಅವರು, ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರಲ್ಲಿರುವ ಕನ್ನಡದ ಅಪ್ಪಟ ಕಾಳಜಿ ಮಾದರಿಯಾಗಿದೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ದೇ.ಜ.ಗೌ. ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಹೋರಾಟದ ಬದುಕು’ ಎಂಬುದು ಅವರ ಬದುಕಿನ ಪ್ರಾಮಾಣಿಕ ಚಿತ್ರವನ್ನು ನೀಡುವ ಗಮನಾರ್ಹವಾದ ಕೃತಿಯಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಶಿಕ್ಷಕರಾದ ಶಿಕ್ಷಕರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ ಹಾಗೂ ವಿದ್ಯಾರ್ಥಿಗಳಿದ್ದರು.