ಮಹಿಳೆ ಅಪಹರಿಸಿ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ
ಕಲಬುರಗಿ,ಜು.6-ಮಹಿಳೆಯನ್ನು ಅಪಹರಿಸಿ ಹಲ್ಲೆ ಮಾಡಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಇಲ್ಲಿನ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 75 ಸಾವಿರ ರೂ.ದಂಡ ವಿಧಿಸಿದೆ.
ಆಸೀಫ್ ತಂದೆ ಪಾಷಾ ಶಿಕ್ಷೆಗೆ ಗುರಿಯಾದ ಆರೋಪಿ.
27.9.2021 ರಂದು ನಗರದ ಕಾಲೇಜು ಒಂದರಲ್ಲಿ ಬಿ.ಎ.ಅಂತಿಮ ವರ್ಷದ ಪರೀಕ್ಷೆ ಬರೆಯಲು ಆಗಮಿಸಿದ್ದ ಮಹಿಳೆ, ಪರೀಕ್ಷೆ ಬರೆದು ನಗರದಲ್ಲಿರುವ ಗೆಳತಿಯ ಮನೆಗೆ ಹೋಗಲೆಂದು ಆಟೋ ಹತ್ತಿದ್ದಳು. ಆಟೋ ಚಾಲಕ ಆಸೀಫ್ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಸಾರ್ವಜನಿಕರು ಬರುವುದನ್ನು ನೋಡಿ ಮಹಿಳೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ನೊಂದ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ದೂರು ಸ್ವೀಕರಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ದಿಲೀಪ್ ಕುಮಾರ್ ಸಾಗರ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಸಿ.ಡಿ.ಕರೋಶಿ ಅವರು ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 75 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ವಾದ ಮಂಡಿಸಿದ್ದರು.