ಇನ್ನೊಬ್ಬರಿಗೆ ಮಾದರಿಯಾಗುತ್ತಿರುವ ರೈತರು: ಡಾ.ಕುರುಬರ್ ಶ್ಲಾಘನೆ
ಕಲಬುರಗಿ,ಜು.6-ರೈತರು ನೂತನ ಕೃಷಿ ತಾಂತ್ರಿಕತೆಗಳ ಜೊತೆಗೆ ಸಮಗ್ರ ಕೃಷಿ ಪದ್ಧತಿ, ಪರ್ಯಾಯ ಬೆಳೆ ಯೋಜನೆ, ಹವಮಾನ ಬದಲಾವಣೆಗೆ ತಕ್ಕಂತೆ ನೂತನ ತಳಿಗಳನ್ನು ಅಳವಡಿಸಿಕೊಳ್ಳುವಲ್ಲಿ ಸಫಲರಾಗಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗುತ್ತಿರುವುದನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದದ ಸಹ ವಿಸ್ತರಣಾ ನಿರ್ದೇಶಕ ಡಾ.ಎ.ಆರ್.ಕುರುಬರ್ ಶ್ಲಾಘಿಸಿದರು.
ಜೇವರ್ಗಿ ತಾಲ್ಲೂಕಿನ ರದ್ದೇವಾಡ್ಗಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರೈತಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಮ್ಮ ಜ್ಞಾನವನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡು ಕೃಷಿಯಲ್ಲಿ ನೂತನ ಬದಲಾವಣೆಯನ್ನು ತರಬೇಕು ಎಂದು ಕರೆ ನೀಡಿದರು.
ರೈತರು ಚಿಂತೆ ಬಿಟ್ಟು, ಚಿಂತನೆ ಮಾಡಿ ಬದಲಾವಣೆಯ ಹೊಸ ರೂಪ ಪಡೆಯಬೇಕು, ಈಗಾಗಲೇ ಬದಲಾವಣೆ ಹೊಂದಿದ ರೈತರ ಹೊಲಗಳಿಗೆ ಭೇಟಿ ಕೊಟ್ಟು ಅವರು ಅಳವಡಿಸಿಕೊಂಡ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕು, ರೈತ ಸಭೆ ಮತ್ತು ಹಂಗಾಮಿಗನುಗುಣವಾಗಿ ರೈತರು ರೈತರ ಜಾತ್ರೆ ಮತ್ತು ಮೇಳಗಳನ್ನು ಮಾಡಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಎ.ಹೆಚ್.ಯಾಲಮನಿ ಅವರು ಮಾತನಾಡಿ, ರೈತರು ರೈತ ಸಂಪರ್ಕ ಕೇಂದ್ರದ ಜೊತೆ ಆರೋಗ್ಯಕರ ನಂಟು ಹೊಂದಿದಲ್ಲಿ ಕೃಷಿಯಲ್ಲಿ ಆರ್ಥಿಕ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಪಿ.ವಾಸುದೇವ ನಾಯ್ಕ ಅವರು ಮಾತನಾಡಿ, ದೇಶದ ಆರ್ಥಿಕತೆ ಬಲಿಷ್ಠಗೊಳ್ಳಲು ರೈತರು ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ನೂತನವಾಗಿ ಸೇರಿದ ವಿಜ್ಞಾನಿಗಳಾದ ಡಾ.ಚಂದ್ರಕಾಂತ (ಮಣ್ಣು ವಿಜ್ಞಾನ), ಡಾ.ಮಲ್ಲಪ್ಪ (ಬೇಸಾಯಶಾಸ್ತ್ರ) ಅವರನ್ನು ಸ್ವಾಗತಿಸಿ ರೈತರಿಗೆ ಪರಿಚಯಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ.ಚೇತನ್ ಟಿ.ಸ್ವಾಗತಿಸಿದರು. ಪ್ರಗತಿಪರ ರೈತ ಪರಶುರಾಮ ಸೇರಿದಂತೆ ವಿವಿಧ ಗ್ರಾಮಗಳ ಸಾಧಕ ರೈತರು ಮತ್ತು ಯುವಕರು ಹಾಗೂ ಕೇಂದ್ರದ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.