ವಾಡಿ: ಅರ್ಧಕ್ಕೆ ನಿಂತ ಅಂಬೇಡ್ಕರ್ ಭವನ
ವಾಡಿ,ಜು.6-ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಮುಂಬೈಯಿಂದ ಹೈದ್ರಾಬಾದಗೆ ತೆರಳುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಾಡಿ ಪಟ್ಟಣಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಭೀಮ ನಗರದ ದಲಿತ ಸಮುದಾಯದ ನಾಯಕರ ಜೊತೆ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಎರಡು ಬಾರಿ ಭೇಟಿ ನೀಡಿದ ಸವಿನೆನಪಿಗಾಗಿ ವಾಡಿ ಪಟ್ಟಣದಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಿಸಲು ಸಾಕಷ್ಟು ಹೋರಾಟ ನಡೆಸಲಾಗಿತ್ತು. ಕೊನೆಗೆ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಭವನ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಭವನ ನಿರ್ಮಾಣ ಕಾಮಗಾರಿ ಮಾತ್ರ ಮುಗಿಯುತ್ತಲೇ ಇಲ್ಲ ಎನ್ನುತ್ತಾರೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಮುಖಂಡ ಶರಣಪ್ಪ ವಾಡೇಕರ್ ಅವರು. ಅರ್ಧಕ್ಕೆ ನಿಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು, ಒಂದು ವಾರದಲ್ಲಿ ಭವನ ನಿರ್ಮಾಣ ಕಾಮಗಾರಿ ಆರಂಭಿಸದಿದ್ದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.