ರೈತರಿಗೆ ಸಮರ್ಪಕ ಸೇವೆ ಒದಗಿಸಿ: ಶಾಸಕ ವಿಠಲ ಕಟಕದೊಂಡ ಕರೆ
ವಿಜಯಪುರ,ಜು.6:ಹವಾಮಾನ ವೈಪರೀತ್ಯಗಳ ನಡುವೆ ರೈತರು ಕಷ್ಟಪಟ್ಟು ವ್ಯವಸಾಯ ಮಾಡುತ್ತಿದ್ದು, ಅವರಿಗೆ ಸಕಾಲದಲ್ಲಿ ಕೃಷಿ ಪರಿಕರಗಳ ವ್ಯವಸ್ಥೆ ಮಾಡಬೇಕೆಂದು ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಕೃಷಿ ಪರಿಕರ ಮಾರಾಟಗಾರರಿಗೆ ಕಿವಿಮಾತು ಹೇಳಿದರು.
ಮ್ಯಾನೇಜ್ ಹೈದರಾಬಾದ ಹಾಗೂ ಸಮೇತಿ (ಉತ್ತರ), ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ಇಲಾಖೆ-ಆತ್ಮ ಯೋಜನೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವಿಜಯಪುರ ಇವರ ಸಹಯೋಗದೊಂದಿಗೆ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಕೋರ್ಸನ ‘ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರೈತ ದೇಶದ ಬೆನ್ನೆಲೆಬು, ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ನಾವು ಬೇರೆ ರಾಷ್ಟ್ರದವರಿಂದ ಅಳಿದುಳಿದ ಗೋಧಿ ಮತ್ತಿತರ ಆಹಾರ ಧಾನ್ಯಗಳನ್ನು ಉಪಯೋಗಿಸುತ್ತಿದ್ದೆವು. ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರಲಿಲ್ಲ. ಆದರೆ ಇಂದು ಕೃಷಿ ವಿಜ್ಞಾನಿಗಳ ಸಹಕಾರದಿಂದ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಿದ್ದೇವೆ ಮತ್ತು ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಇದೊಂದು ಕೃಷಿಯಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರಿಗೆ ತಾಂತ್ರಿಕವಾಗಿ ಸಬಲರಾಗಲು ಮತ್ತು ರೈತರಿಗೆ ಅನುಕೂಲವಾಗುವಂತೆ ದೇಶಿ ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿ ಪರಿಕರ ಮಾರಾಟಗಾರರು, ರೈತರಿಗೆ ಅನಗತ್ಯ ಹೊರೆಯಾಗದಂತೆ ಅವರ ಸಮಸ್ಯೆಗನುಸಾರವಾಗಿ ಪರಿಕರಗಳನ್ನು ವಿತರಿಸುವಂತೆ ಸಲಹೆ ನೀಡಿದರು.
ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಮಾತನಾಡಿ, ಪರಿಕರ ಮಾರಾಟಗಾರರು, ರೈತರು ಮತ್ತು ಇಲಾಖೆಗಳ ಮಧ್ಯೆ ಸಮಾನಾಂತರ ವಿಸ್ತರಣಾ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬೇಕು. ಬದಲಾಗುತ್ತಿರುವ ಹೊಸ ತಾಂತ್ರಿಕತೆಗಳನ್ನು ತಿಳಿದುಕೊಳ್ಳಲು, ಯಾವುದೇ ಶುಲ್ಕವಿಲ್ಲದೇ ವಿವಿಯಿಂದ ಪುನಶ್ಚೇತನ ತರಬೇತಿ ನೀಡಲಾಗುವದು. ಇದನ್ನಾಧರಿಸಿ ನಿಮ್ಮ ಲೈಸನ್ಸ್ ನವೀಕರಣಗೊಳ್ಳುವುದು ಎಂದರು.
ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮಾತನಾಡಿ, ರೈತರು ಮೊಟ್ಟ ಮೊದಲು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೃಷಿ ಪರಿಕರ ಮಾರಾಟಗಾರರ ಬಳಿ ಬರುತ್ತಾರೆ. ಬೀಜ, ಗೊಬ್ಬರ, ಕೀಟನಾಶಕ ಕಾಯ್ದೆಯನ್ವಯ ಕಳಪೆ ಗುಣಮಟ್ಟದ ಸಾಮಗ್ರಿ ವಿತರಿಸಿದರೆ ಅಂಥವರ ಲೈಸನ್ಸನ್ನು ರದ್ದು ಮಾಡಲಾಗುತ್ತದೆ. ಕಾರಣ ರೈತರಿಗೆ ಯಾವತ್ತು ಮೋಸ ಮಾಡದಿರಲು ಮನವರಿಕೆ ಮಾಡಿದರು.
ಡಾ. ಬಾಲರಾಜ ಬಿರಾದಾರ ಸ್ವಾಗತಿಸಿದರು. ಎಮ್.ಆರ್. ಮೈದರಗಿ ನಿರೂಪಿಸಿದರು. ಪ್ರಶಾಂತ ಸಾನಿ ವಂದಿಸಿದರು. ಸಮಾರಂಭದಲ್ಲಿ ವಿದ್ಯಾಧಿಕಾರಿ ಡಾ. ಎ. ಭೀಮಪ್ಪ, ಸಹ ಸಂಶೋಧನಾ ನಿರ್ದೇಶಕ ಡಾ. ಎ.ಎಸ್. ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉಪ ನಿರ್ದೇಶಕ ಡಾ. ಬಾಲರಾಜ ಬಿರಾದಾರ, ಡಾ. ಎಮ್. ಪಿ. ಪೋತದಾರ, ಡಾ. ಎಸ್.ಎಮ್. ವಸ್ತ್ರದ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ವಿಜಯಲಕ್ಷ್ಮೀ ಚವ್ಹಾಣ, ಪಾರ್ವತಿ ಪಾಟೀಲ, ಪ್ರಶಾಂತ ಸಾನಿ, ಕೃಷಿ ಅಧಿಕಾರಿಗಳಾದ ಎಮ್. ಆರ್. ಮೈದರಗಿ, ಗೀತಾ ಬಜಂತ್ರಿ, ಫಾತಿಮಾಬಾನು ಸೇರಿದಂತೆ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.