ಬ್ರಿಮ್ಸ್ ಹೊರಗುತ್ತಿಗೆ ಡಿ. ಗ್ರೂಪ್ ನೌಕರರ ವೇತನ ಪಾವತಿಗೆ ಆಗ್ರಹ
ಬೀದರ್:ಜು.6: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರ 6 ತಿಂಗಳ ವೇತನ ಪಾವತಿಸಬೇಕೇಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಪ್ರಕಟಣೆ ಹೊರಡಿಸಿರುವ ಸಂಘಟನೆ ಪ್ರಮುಖರು, ಕಳೆದ ಐದಾರು ತಿಂಗಳುಗಳಿಂದ ಬ್ರಿಮ್ಸ್ ಹೊರಗುತ್ತಿಗೆ ಡಿ ಗ್ರೂಪ್ ನೌಕರರ ಸಂಬಳ ನೀಡಿರುವುದಿಲ್ಲ ಈ ನೌಕರರು ತುಂಬ ಕಡು ಬಡವರಾಗಿದ್ದು, ಜೀವನ ನಡೆಸಲು ಹರಸಾಹಸ ಪಡುತ್ತಿರುವರು. ಅವರ ಮಕ್ಕಳ ವಿದ್ಯಾಭ್ಯಾಸ ಸಹ ಕುಂಠಿತಗೊಂಡಿದ್ದು, ದಿನನಿತ್ಯ ಬದುಕು ದುಸ್ತರವಾಗಿದೆ. ಇಂಥ ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆಯುವುದು ಯಾವ ನ್ಯಾಯ? ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಅಲ್ಲಿಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ಕೂಡಲೇ ಅವರ ವೇತನ ಬಿಡುಗಡೆಗೊಳಿಸಬೇಕೆಂದು ಸಂಘಟನೆ ಒತ್ತಾಯಿಸುತ್ತದೆ. ಒಂದು ವೇಳೆ ಒಂದು ವಾರದ ಒಳಗಾಗಿ ಈ ಹೊರಗುತ್ತಿಗೆ ಡಿ ಗ್ರೂಪ್ ನೌಕರರ ಸಂಬಳ ಮಾಡದೆ ಇದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ ಕೆನಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಚೆಟ್ಟಿ, ಉಪಾಧ್ಯಕ್ಷ ಸಚೀನ ಹೆಗ್ಗೆ ಸೇರಿದಂತೆ ಇತರರು ನಿಯೋಗದಲ್ಲಿದ್ದರು.