ಶೈಕ್ಷಣಿಕ, ಸಾಂಸ್ಕøತಿಕ ಕ್ಷೇತ್ರದ ಅದ್ಭುತ ಸಾಧಕ
ಬೀದರ್:ಜು.6:ಹಾಲಹಳ್ಳಿ ಬಳಿಯ ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವವಿದ್ಯಾಲಯದ ಡೀನ್ ಹಾಗೂ ಕರ್ನಾಟಕ ಕಾಲೇಜಿನ ಸ್ನಾತಕ, ಸ್ನಾತಕೋತ್ತರ ಕನ್ನಡ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಾಹಿತಿ, ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣವು ಡಾ. ಹೆಬ್ಬಾಳೆ ಅವರ ಸಾಧನೆ, ಕೊಡುಗೆಯನ್ನು ತೆರೆದಿಡುವವಲ್ಲಿ ಯಶಸ್ವಿಯಾಯಿತು.
ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಿ.ಎಸ್. ಬಿರಾದಾರ್, ಹಿರಿಯ ವಿದ್ವಾಂಸ ಡಾ. ಸೋಮನಾಥ ಯಾಳವಾರ್, ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ್ ಸೇರಿದಂತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ವಿದ್ವಾಂಸರು ಡಾ. ಜಗನ್ನಾಥ ಹೆಬ್ಬಾಳೆ ಅವರು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ, ಜಾನಪದ ಮುಂತಾದ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ವಿಶ್ವವಿದ್ಯಾಲಯವೊಂದು ಮಾಡಬಹುದಾದ ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಡಾ. ಹೆಬ್ಬಾಳೆ ಅವರು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಕುಲಪತಿ ಪೆÇ್ರ. ಬಿ.ಎಸ್. ಬಿರಾದಾರ್ ಅವರು ಮಾತನಾಡಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುವಂತಾಗಲಿ ಎಂಬ ಕಾರಣಕ್ಕಾಗಿ ಡಾ.ಹೆಬ್ಬಾಳೆ ಅವರ ಬದುಕು, ಸಾಧನೆ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು. ಇದು ಒಬ್ಬ ವ್ಯಕ್ತಿಯ ಕುರಿತಾದ ವಿಚಾರ ಸಂಕಿರಣ ಅಲ್ಲ. ಬದಲಾಗಿ ವ್ಯಕ್ತಿಯೊಬ್ಬರು ಹತ್ತಾರು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ತಿಳಿದುಕೊಂಡು, ಅದರಿಂದ ಪ್ರೇರಣೆ ಪಡೆಯುವುದಕ್ಕಾಗಿ ಹಮ್ಮಿಕೊಳ್ಳಲಾಗಿರುವ ವಿಚಾರ ಸಂಕಿರಣವಾಗಿದೆ ಎಂದು ಕುಲಪತಿಯವರು ಹೇಳಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ನುಡಿ ಇದೆ. ಪೆÇ್ರ ಹೆಬ್ಬಾಳೆಯವರು ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಕಲೆ, ಸಾಹಿತ್ಯ, ಬೋಧನೆ, ಸಂಶೋಧನೆ, ಜಾನಪದ, ಕಾರ್ಯಕ್ರಮ ಆಯೋಜನೆ ಹೀಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳೆರಡರಲ್ಲೂ ಕಾರ್ಯನಿರ್ವಹಿಸಿದ್ದಾರೆ. ನಾಡಿನ, ದೇಶದ ವಿದ್ವಾಂಸರನ್ನು, ಕಲಾವಿದರನ್ನು ಜಿಲ್ಲೆಗೆ ಆಹ್ವಾನಿಸಿ, ಇಲ್ಲಿನ ಜನರಲ್ಲಿ ಕಲಾಭಿರುಚಿ ಹೆಚ್ಚಿಸಿದ್ದಾರೆ. ಹಾಗೆಯೇ ಇಲ್ಲಿನ ಕಲಾವಿದರಿಗೆ ದೇಶದ ವಿವಿಧೆಡೆ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಮೂಲಕ ಸಾಂಸ್ಕೃತಿಕ ವಿನಿಮಯಕ್ಕೆ ನೆರವಾಗಿದ್ದಾರೆ ಎಂದು ಹೇಳಿದರು.
ಪಿಎಚ್‍ಡಿ, ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಬಹುತೇಕ ಮೆರೆಯಾಗಿರುವ ಜಾನಪದ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಜಾತ್ರೆಗಳ ಕುರಿತು ಸಂಶೋಧನೆ ಮಾಡಿದ್ದಾರೆ ಎಂದರು.
ಕಲಬುರಗಿಯ ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ್ ಮಾತನಾಡಿ, ಡಾ. ಜಗನ್ನಾಥ ಹೆಬ್ಬಾಳೆ ಅವರಲ್ಲಿನ ಸಂಘಟನಾ ಶಕ್ತಿ ಅನನ್ಯವಾಗಿದೆ ಎಂದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ಜಾನಪದ ಸಮ್ಮೇಳನ ಸೇರಿದಂತೆ ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಹೆಬ್ಬಾಳೆ ಅವರದ್ದು ಎಂದರು.
ಕರ್ನಾಟಕ ಕಾಲೇಜಿನ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸಿದ ಹೆಬ್ಬಾಳೆ ಅವರು, ಕನ್ನಡ ಸಂಶೋಧನಾ ಕೇಂದ್ರದ ಆರಂಭಕ್ಕೂ ಕಾರಣರಾಗಿದ್ದಾರೆ. ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಬೀದರಿನಲ್ಲಿ ಶುರುವಾಗಲು ಹೆಬ್ಬಾಳೆ ಅವರೇ ಕಾರಣರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಜೀವ ತುಂಬಿದ್ದಾರೆ. ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಕಲಾವಿದರ ಮತ್ತು ಬರಹಗಾರರ ಸಂಘ ಹೀಗೆ ಹಲವು ಸಂಘ ಸಂಸ್ಥೆಗಳನ್ನು ಶಕ್ತಿಯುತವಾಗಿ ಬೆಳೆಸಿದ್ದಾರೆ ಎಂದು ಕೊಂಡಾಡಿದರು.
ದೆಹಲಿಯ ವೆಂಕಟೇಶ್ವರ ವಿಶ್ವವಿದ್ಯಾಲಯದ ಸಂಶೋಧನಾ ಮಾರ್ಗದರ್ಶಕ ಪೆÇ್ರ. ಉಮಾಕಾಂತ ಪಾಟೀಲ್ ಮಾತನಾಡಿ, ಡಾ. ಜಗನ್ನಾಥ ಹೆಬ್ಬಾಳೆ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಹೆಬ್ಬಾಳೆ ತಾವೊಬ್ಬರೇ ಬೆಳೆಯುವುದಿಲ್ಲ. ತಮ್ಮ ಅಕ್ಕಪಕ್ಕದಲ್ಲಿದ್ದವರನ್ನೂ ಬೆಳೆಸುವ ದೊಡ್ಡ ಗುಣ ಹೊಂದಿದ್ದಾರೆ. ಮರೆಯಲ್ಲಿದ್ದವರನ್ನು ಬೆಳಕಿಗೆ ತರುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.
ವಿದ್ವಾಂಸ ಡಾ. ಸೋಮನಾಥ ಯಾಳವಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವ ಪರಮೇಶ್ವರ ನಾಯ್ಕ, ರಾಷ್ಟ್ರೀಯ ಜಾನಪದ ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ, ಡಾ. ಜಗನ್ನಾಥ್ ಹೆಬ್ಬಾಳೆ, ಡಾ. ಸಾವಿತ್ರಿ ಹೆಬ್ಬಾಳೆ, ಡಾ. ಮಹಾನಂದಾ ಮಡಕಿ, ಡಾ. ರಾಮಚಂದ್ರ ಗಣಾಪುರ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಡಾ. ಅಶೋಕ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆÇ್ರ. ಸುರೇಖಾ ಬಿರಾದಾರ್ ಸ್ವಾಗತಿಸಿದರು. ಡಾ. ಸುನೀತಾ ಕೂಡ್ಲಿಕರ್ ನಿರೂಪಿಸಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಅಧ್ಯಾಪಕರು ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದ ನಂತರ ವಿಚಾರ ಸಂಕಿರಣ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಬೀದರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಬೀದರಿನ ಕರ್ನಾಟಕ ಕಾಲೇಜಿನ ಸ್ನಾತಕ, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.