ಶ್ರಮಿಕರ ದುಡಿತಕ್ಕೆ ಮೌಲ್ಯ ತಂದದ್ದು ಕಾಯಕ ಸಿದ್ಧಾಂತ:ಶರಣಯ್ಯ ಚೆರದ್
ಹೊಸಪೇಟೆ, ಜು.06: ದೀನ ದಲಿತ ಶ್ರಮಿಕರ ದುಡಿತಕ್ಕೆ ಮೌಲ್ಯತೆಯ ಮಹತ್ವ ತಂದುಕೊಟ್ಟುದೇ ಶರಣರ ಕಾಯಕ ತತ್ವದ ಸಿದ್ಧಾಂತವಾಗಿದೆ ಎಂದು ಸ್ಥಳೀಯ ರಾಣಿ ಚೆನ್ನಮ್ಮ ಪ್ರೌಢ ಶಾಲೆಯ ಮುಖ್ಯ ಗುರು ಶರಣಯ್ಯ ಚೆರದ್ ಹೇಳಿದರು .
ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ರಾಣಿ ಚೆನ್ನಮ್ಮ ಪ್ರೌಢ ಶಾಲೆಯಲ್ಲಿ ಶುಕ್ರವಾರ ಜರುಗಿದ ದಿ.ಮಲ್ಲಾರಪ್ಪ ಎಲ್ಲವ್ವ ಕರಿಭೀಮಣ್ಣ ದತ್ತಿ, ಕೆ.ಜಹಿರಾಬಿ ನಬೀಸಾಬ್ ದತ್ತಿ, ಹಂಪಸಾಗರದ ಪದ್ಮಾವತಿ ಬಾಯಿ ಶ್ರೀನಿವಾಸಾಚಾರ್ಯ ದತ್ತಿ, ಹಾಗೂ ಶ್ರೀಮತಿ ಸುಭದ್ರಮ್ಮ ಕರಣಂ ಭೀಮಸೇನರಾವ್ ದತ್ತಿ ಕಾರ್ಯಕ್ರಮದಲ್ಲಿ “ವಚನಗಳಲ್ಲಿ ಕಾಯಕ ಪರಿಕಲ್ಪನೆ” ಕುರಿತು ಉಪನ್ಯಾಸ ನೀಡಿದರು.
ದೈಹಿಕ ಪರಿಶ್ರಮಕ್ಕೆ ಒಳಪಟ್ಟಿದ್ದೇ ಕಾಯಕ, 12ನೇ ಶತಕದಲ್ಲಿ  ವಿಶ್ವಗುರು ಬಸವಣ್ಣನವರ ನೇತೃತ್ವದ ಸಾಮಾಜಿಕ ಧಾರ್ಮಿಕತೆಯ ಶರಣರ ವಚನ ಸಾಹಿತ್ಯದಲ್ಲಿ ಕಾಯಕ ದಾಸೋಹ ಪ್ರಸಾಧ ತತ್ವಾಚರಣೆಯು ಮಹತ್ವ ಕಂಡಿತ್ತು.ಕಾಯಕದಿಂದ ಬಂದ ಸಂಪಾದನೆಯಲ್ಲಿಯೇ  ಪ್ರಸಾಧ ಸ್ವೀಕಾರಕೆ ಹಕ್ಕಿದೆ. ಗಳಿಕೆಯ ಒಂದಿಷ್ಟನ್ನ ಸಮಾಜಕೆ ಧರ್ಮಕೆ ದಾಸೋಹವಾಗಿ ವಿನಿಯೋಗಿಸಬೇಕು. ಗಳಿಕೆ ಬಳಕೆ ಹಂಚಿಕೆ ಮೂಲಕ ಸಾಮಾಜಿಕ ಸಮತೆಯು ಕಾಯಕದ ಶರಣ ಸಿದ್ಧಾಂತವಿತ್ತು.ಕಾಯಕದ ವೃತ್ತಿಗಳಲ್ಲಿ ನಿಷ್ಠೆ,  ಶ್ರದ್ಧೆ ಜೊತೆಗೆ ಸಮಾನತೆಯನ್ನ ಶರಣರು ಕಂಡುಕೊಂಡರು.
ತಳವಾರ ಕಾಮಿದೇವ, ಮಡಿವಾಳ ಮಾಚಿದೇವ,  ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಆಯ್ದಕ್ಕಿ ಮಾರಣ್ಣ, ಆಯ್ದಕ್ಕಿ ಲಕ್ಕಮ್ಮ, ಹೀಗೆ  ನೂರಾರು ಶರಣರು ತಮ್ಮ ವೃತ್ತಿ ಕಾಯಕದ ಮಹತ್ವವ ತಮ್ಮ ವಚನಗಳಲಿ ಸಾರಿದ್ದಾರೆ ಎಂದರು.
“ಈಸಕ್ಕಿ ಆಶೆ ನಿಮಗೇಕಯ್ಯ ಈಶ್ವರನೊಪ್ಪ” ಎಂದು ಶರಣೆ ಲಕ್ಕಮ್ಮಳು ಪತಿ ಮಾರೆಣ್ಣ ತಂದಂತಹ ಹೆಚ್ಚಿನ ಅಕ್ಕಿ ಸಂಪಾದನೆಯನ್ನ  ಬೇಡವೆಂದು, ಕಾಯಕದೊಳು ನಿರತನಾದೊಡೆ ಗುರು ದರ್ಶನವಾದರೂ ಲಿಂಗ ಪೂಜೆಯಾದರೂ ಮರೆಯಬೇಕು ಜಂಗಮದ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ  ಲಿಂಗವಾದೆಡೂ ಕಾಯಕದೊಳಗು ಎಂದು ಶರಣೆ ಲಕ್ಕಮ್ಮಳ ವಚನೆಯು ಕಾಯಕದ ಹಿರಿಮೆಯ ತೋರಿಸಿದೆ. ಶರಣ ನುಲಿಯ ಚಂದಯ್ಯ ಅವರು ಹಳ್ಳ ಕೆರೆಯಲಿ ನೂಲಿಗಾಗಿ ಹುಲ್ಲನ್ನ ಕೊಯ್ಯುವಾಗ,ಕೊರಳಲ್ಲಿನ ಲಿಂಗವು ಜಾರಿ ನೀರಿಗೆ ಬಿದ್ದರೂ ಸಹ, ಆತ ತನ್ನ ಕಾಯಕದಿಂದ ವಿಚಲಿತನಾಗದೇ ಕಾಯಕದಲ್ಲೇ ತೊಡಗುವನು. ಹೀಗೆ ಶರಣರಿಗೆ ದೇಹವೇ ದೇವಾಲಯ ಕಾಯಕವೇ ನಿಜ ಕೈಲಾಸವಾಗಿ, ಶರಣರ ವಚನಗಳಲ್ಲಿ ಅವರ ವೃತ್ತಿ ಕಾಯಕಗಳ ಪರಮ ನಿಷ್ಠೆ ಕಾಣುತ್ತೇವೆ ಎಂದರು.
ಹೊಸಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಶರಣ ತತ್ವ, ವೈಚಾರಿಕತೆ ನೋಟದ ಕಾಯಕ ಸಿದ್ಧಾಂತ, ಸಾಮಾಜಿಕ ಧಾರ್ಮಿಕ ಸಮಾನತೆಯ ವೃತ್ತಿ ಸಮತೆಯ ಕಾಯಕ ಸಿದ್ಧಾಂತವು ನವ ಸಮಾಜ ನಿರ್ಮಾಣದ ಪರಿಕಲ್ಪನೆಯಾಗಿತ್ತು ಎಂದರು.
ದತ್ತಿ ದಾನಿ ಲಕ್ಷ್ಮಣ ಕರಿಭೀಮಣ್ಣನವರ್ ಮಾತನಾಡಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಿಕ್ಷಕ ಕೆ. ಪ್ರಕಾಶ ಅದ್ಯಕ್ಷತೆ ವಹಿಸಿದ್ದರು.
ಶಾಲೆಯ ವಿದ್ಯಾರ್ಥಿ ಎನ್ ಟಿ. ರಮೇಶ ಪ್ರಾರ್ಥನಿಸಿದರು. ಪರಿಷತ್ತಿನ ಕಾರ್ಯದರ್ಶಿ ಮುದೇನೂರು ಉಮಾಮಹೇಶ್ವರ ಸ್ವಾಗತಿಸಿದರು. ಗಾಯಕಿ ಪುಷ್ಪಾ ಮಲ್ಲಿಕಾರ್ಜುನ ವಚನ ಗಾಯನ ಮಾಡಿದರು. ಶಿಕ್ಷಕ ಒಪ್ಪತ್ತೇಶ್ವರ ವಂದನಾರ್ಪಣೆ ನೆರವೇರಿಸಿದರು. ಪರಿಷತ್ತಿನ ಡಾ.ಗುಂಡಿ ಮಾರುತಿ, ಸೋ ದಾ ವಿರೂಪಾಕ್ಷಗೌಡ, ಯಮನಪ್ಪ ಇತರರು ಪಾಲ್ಗೊಂಡಿದ್ದರು.
