ಕರಾವಳಿಯಲ್ಲಿ ಭಾರೀ ಮಳೆ ಜನ ತತ್ತರ
ಮಂಗಳೂರು, ಜೂ.೬- ಕರಾವಳಿ ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ಕಳೆದ ೨ ವಾರಗಳಿಂದ ನಿರಂತರ ಮಳೆಯಾಗುತ್ತಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲೆ ಹಾಗೂ ಪಿಯುಸಿ ತರಗತಿಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಹಗಲಿನಲ್ಲಿ ಕಡಿಮೆ ಮಳೆಯಾಗಿದೆ. ಆದರೆ ಸಂಜೆಯ ನಂತರ ವಿವಿಧೆಡೆ ಮಳೆ ಸುರಿದಿದೆ. ಇಂದು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ, ವಿವಿಧೆಡೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಭಾನುವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ (೧೨ನೇ ತರಗತಿವರೆಗೆ) ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂದು ರಜೆ ಘೋಷಿಸಿದೆ.
ಸಂಭವನೀಯ ಪ್ರವಾಹ -ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು-ಪ್ರವಾಸಿಗರು ನೀರಿರುವ ತಗ್ಗು ಪ್ರದೇಶಗಳು, ಕೆರೆ, ನದಿ, ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಲು, ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ನದಿ-ಹಳ್ಳ, ವಿದ್ಯುತ್ ಕಂಬ-ತಂತಿಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು, ಸಾರ್ವಜನಿಕರು ಅಪಾಯಕಾರಿ ಸಂದರ್ಭಗಳಿಂದ ದೂರವಿರಬೇಕು ಮತ್ತು ಸಂಭವನೀಯ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ಘಟನೆಗಳು ಅಥವಾ ಸಂಭವಿಸುವ ಸೂಚನೆಯ ಸಂದರ್ಭದಲ್ಲಿ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಪಂಚಾಯತ್-ನಗರ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲು ಸೂಚಿಸಲಾಗಿದೆ.