ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಆಗ್ರಹ.
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.06:  ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರಜೆ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು ಮತ್ತು ಓವರ್ ಹೆಡ್ ಟ್ಯಾಂಕ್ ನೀರನ್ನ ಬ್ಲೀಚಿಂಗ್ ಪೌಡರ್ ನಿಂದ ಸ್ವಚ್ಛಗೊಳಿಸಿ ಕುಡಿಯಲು ಯೋಗ್ಯವಾದ ನೀರನ್ನು ತುಂಬಿಸಬೇಕು ಎಂದು ಆಗ್ರಹಿಸಿ ಎಐಡಿವೈಓ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾಧ್ಯಕ್ಷರಾದ ಎ.ಪಂಪಾಪತಿ ಕೋಳೂರು ಅವರು ಮಾತನಾಡಿ, ‘ಬಳ್ಳಾರಿಯಲ್ಲಿ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ ರೋಗಗಳಿಗೆ ಮಹಿಳೆಯರು, ಮಕ್ಕಳು, ವೃದ್ಧರು ಬಹು ಬೇಗನೆ ಈ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ರೋಗಕ್ಕೆ ತುತ್ತಾದವರ ಸಾಕಷ್ಟು ಪ್ರಕರಣಗಳು ಗಣನೀಯವಾಗಿ ದಾಖಲಾಗುತ್ತಿವೆ, ಈಗ ಮಳೆಗಾಲವೂ ಆಗಿರುವುದರಿಂದ ನೀರು ಸಂಗ್ರಹ ವಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ರೋಗಗಳು ಹರಡಲು ತುಂಬಾ ಅನುಕೂಲಕರವಾಗಿದೆ, ಹಾಗಾಗಿ ಈ ರೋಗಗಳಿಗೆ ಕಾರಣವಾದ ಕೊಳಚೆ ನೀರು ನಿಲ್ಲುವ ಸ್ಥಳ, ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೇಕು ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೇಮಕಲ್, ರೈತ ನಾಯಕರಾದ ಕೆ.ಬಸಣ್ಣ, ಶೇಖಣ್ಣ, ನಾಗರಾಜ, ಶಿವಪ್ಪ, ಜಿನ್ನಾ ಶೇಕಣ್ಣ, ನಿಂಗಪ್ಪ, ಬಸಣ್ಣ, ಶೇಕ್ಷವಲಿ, ಹೇಮಣ್ಣ,ಗಂಗಾಧರ, ಮಾರುಫ್, ಗಾದಿಲಿಂಗಪ್ಪ ವೆಂಕನಗೌಡ, ಶಾಂಭು  ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.