ಏಕ ಬಳಕೆ ಪ್ಲಾಸ್ಟಿಕ್ ಬಳಕೆಗೆಜು.10 ರ ವರೆಗೆ  ಮೇಯರ್ ಗಡವು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,6- ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಪಾಲಿಕೆ ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ ತ್ಯಾಜ್ಯ ಚೆಲ್ಲುವುದು ಮತ್ತು ಏಕ ಬಳಕೆಯ ಪ್ಲಾಸ್ಟೀಕ್ ಕವರ್ ಮೊದಲಾದುವುಗಳ ಬಳಕೆಗೆ ಜು. 10 ರ ವರೆಗೆ ಮೇಯರ್ ನಂದೀಶ್ ಗಡುವು ನೀಡಿದ್ದಾರೆ.
ನಗರದಲ್ಲಿ  ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಎಲ್ಲಾ ವಾಣಿಜ್ಯ ಉದ್ದಿಮೆಗಳು, ಕಿರಾಣಿ ಅಂಗಡಿ, ಬೇಕರಿ, ತರಕಾರಿ ವ್ಯಾಪಾರಸ್ಥರು , ಹೂವು ಹಣ್ಣು ವ್ಯಾಪಾರಸ್ಥರು, ರೆಸ್ಟೋರೆಂಟ್ಗಳು ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಈ ಮೂಲಕ ಸೂಚಿಸಿದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು . ನಮ್ಮ ಬಳ್ಳಾರಿ ನಗರವನ್ನ ಸ್ವಚ್ಛ ಸುಂದರ ಮತ್ತು ಪರಿಸರಸ್ನೇಹಿ ವಾತಾವರಣಯುಕ್ತ ನಗರವನ್ನಾಗಿಸಲು ಎಲ್ಲಾ ನಾಗರೀಕರು ಸಹಕರಿಸಲು ಕೋರಿದ್ದಾರೆ.
ಜೊತೆಗೆ ನಗರದ ಎಲ್ಲಾ  ವಾಣಿಜ್ಯ ಉದ್ದಿಮೆಗಳು, ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಮತ್ತು ಬೀದಿ ಬದಿ ವ್ಯಾಪಾರಸ್ಥರು, ತರಕಾರಿ, ಹೂವು ಹಣ್ಣು  ವ್ಯಾಪಾರಸ್ಥರು ತಮ್ಮ ಅಂಗಡಿಯ ಮುಂದೆ ಅವಶ್ಯಕತೆಗೆ ತಕ್ಕಂತೆ ಕನಿಷ್ಠ 50 ಲೀಟರ್ ಅಳತೆಯ
ಡಸ್ಟ್ ಬಿನ್ಸ್ ಅಥವಾ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇರಿಸಬೇಕು.  ಅಂಗಡಿಗಳು ಡಸ್ಟ್ಬಿನ್ ಇಲ್ಲದೆ ಇದ್ದಲ್ಲಿ ಅವುಗಳಿಗೆ ದಂಡ ವಿಧಿಸಲಾಗುವುದು. ಅಲ್ಲದೆ ನಗರದ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲಾ ವಾಣಿಜ್ಯ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸಲು ಪಾಲಿಕೆಯಿಂದ ಈಗಾಗಲೇ ದಿನಕ್ಕೆ ಎರಡು ಬಾರಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಎಲ್ಲಾ ವ್ಯಾಪಾರಸ್ಥರು ತಮ್ಮ  ಅಂಗಡಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನ ಪಾಲಿಕೆ ವಾಹನಕ್ಕೆ ನೀಡಬೇಕು.  ಯಾರಾದರೂ ತಮ್ಮ ಅಂಗಡಿಯ ಮುಂದೆ ಅಥವಾ ಅಕ್ಕಪಕ್ಕದಲ್ಲಿ ತ್ಯಾಜ್ಯವನ್ನು ಚೆಲ್ಲುವುದು ಕಂಡು ಬಂದಲ್ಲಿ ನಿಯಮಾನುಸಾರ ಆಯಾ ಅಂಗಡಿ ರೂಪಾಯಿ 500 ರಿಂದ 1000 ರೂ ವರೆಗೆ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.