ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿ
ಧಾರವಾಡ, ಜು.6: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗ್ಯೂ ರೋಗ ನಿಯಂತ್ರಣ ಮತ್ತು ನಿಮೂರ್ಲನೆಗಾಗಿ ಜನಜಾಗೃತಿ ಮತ್ತು ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನವಾಗಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ.
ಅದರಂತೆ ಧಾರವಾಡ ನಗರದ ಕೆಲಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ನೇತೃತ್ವದಲ್ಲಿ ಮನೆಮನೆಗೆ ತೆರಳಿ ಡೆಂಗ್ಯೂ ಜಾಗೃತಿ ಕರಪತ್ರ ವಿತರಿಸುವ ಮತ್ತು ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಡೆಂಗ್ಯೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಾಥಾ ನಡಿಗೆಗೆ ಮತ್ತು ನೀರಿನ ತೊಟ್ಟಿಗೆ ಲಾರ್ವಾ ಸೊಳ್ಳೆಯ ಮರಿ ಮತ್ತು ತತ್ತಿಗಳನ್ನು ತಿನ್ನುವ ಗಪ್ಪಿ ಮೀನು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ, ಜಿಲ್ಲಾಧಿಕಾರಿ ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹಲವು ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಲ್ಲೂ ಜನಜಾಗೃತಿಗೆ ಮೊದಲ ಆದ್ಯತೆ ನೀಡಲಾಗಿದೆ. ಮಹಿಳೆ ಮತ್ತು ಮಕ್ಕಳು ಡೆಂಗ್ಯೂ ಬಗ್ಗೆ ತಿಳುವಳಿಕೆ ಹೊಂದುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಡೆಂಗ್ಯೂವನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಳೆದ ಜನವರಿಯಿಂದ ಇಲ್ಲಿಯವರೆಗೆ ಡೆಂಗ್ಯೂ ಕುರಿತು ತಪಾಸಣೆ ಮಾಡಿದ ಶಂಕಿತರ ಪೈಕಿ 253 ಜನರಲ್ಲಿ ಡೆಂಗ್ಯೂ ದೃಡಪಟ್ಟಿದ್ದು, ಅಗತ್ಯ ಔಷಧಿ, ಚಿಕಿತ್ಸೆ ಪಡೆದು ಅವರೆಲ್ಲರೂ ಗುಣಮುಖರಾಗಿದ್ದಾರೆ. ಈಗ ಡೆಂಗ್ಯೂ ಲಕ್ಷಣಗಳಿರುವ 21 ಜನ ಶಂಕಿತರಿದ್ದು, ಇದರಲ್ಲಿ ಮೂರು ಜನ ಆಸ್ಪತ್ರೆಯಲ್ಲಿ ಮತ್ತು 18 ಜನ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಜನರು ಜಾಗೃತರಾಗಿರುವದರಿಂದ ಮತ್ತು ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿರುವದರಿಂದ ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹತೋಟಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಡೆಂಗ್ಯೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲಾಗಿದೆ. ಅಗತ್ಯ ಔಷಧಿಯೂ ದಾಸ್ತಾನಿದೆ. ಆರೋಗ್ಯ ಇಲಾಖೆಯೊಂದಿಗೆ ಕಂದಾಯ, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಇಲಾಖೆ, ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಕೈ ಜೋಡಿಸಿವೆ. ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡೆಂಗ್ಯೂ ಜನಜಾಗೃತಿ ಅಂಗವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕೆಲಗೇರಿ ಗ್ರಾಮದ ಸಾದರ ಓಣಿ, ದ್ಯಾಮವ್ವನ ಗುಡಿ ಓಣಿ, ದಾಳಿಯವರ ಓಣಿ ಮತ್ತು ಹರಿಜನಕೇರಿಯ ಮನೆಮನೆಗಳಿಗೆ ತೆರಳಿ, ಡೆಂಗ್ಯೂ ನಿಯಂತ್ರಣ ಮಾಹಿತಿಯ ಕರಪತ್ರ ವಿತರಿಸಿದರು.
ಗ್ರಾಮದ ಶಾಂತವ್ವ ಮಲ್ಲೂರ, ಶೋಭಾ ಹೆಬ್ಬಳ್ಳಿ, ರೇಖವ್ವ ಮಳಗಿ ಸೇರಿದಂತೆ ಅನೇಕ ಗೃಹಿಣಿಯರಿಗೆ ಅವರ ಮನೆಯಲ್ಲಿ ಲಾರ್ವಾ ನಾಶದ ಕುರಿತು ಮತ್ತು ಈಡೀಸ್ ಸೊಳ್ಳೆಗಳ ಉತ್ಪತಿ ಕುರಿತು ಜಿಲ್ಲಾಧಿಕಾರಿಗಳು ಸ್ವತಃ ಮಾಹಿತಿ ನೀಡಿದರು. ಸ್ವಚ್ಛತೆ ಕಾಪಾಡಲು, ನೀರು ಸಂಗ್ರಹ ಕುರಿತು ವಿವರಿಸಿದರು.
ಲಾರ್ವಾ ನಿರ್ಮೂಲನೆಗೆ ಗಪ್ಪಿ ಮೀನು:* ಡೆಂಗ್ಯೂ ರೋಗಕ್ಕೆ ಕಾರಣವಾದ ಈಡೀಸ್ ಸೊಳ್ಳೆಗಳ ಮೂಲವಾದ ಲಾರ್ವಾ ನಾಶಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಆದ್ಯತೆ ನೀಡಿದೆ. ಮನೆಗಳಲ್ಲಿ ದನಕರು ನೀರು ಕುಡಿಯಲು ಮಾಡಿರುವ ತೊಟ್ಟಿ, ಸಾರ್ವಜನಿಕ ನೀರು ಸಂಗ್ರಹ ತೊಟ್ಟಿಗಳಲ್ಲಿ ಗಪ್ಪಿ ಮೀನು ಬಿಡುವ ಅಭಿಯಾನ ಮಾಡಲಾಗುತ್ತಿದೆ.
ಕೆಲಗೇರಿ ಗ್ರಾಮದ ರೇಖವ್ವ ಮಳಗಿ ಅವರ ಮನೆ ಆವರಣದ ಸಾರ್ವಜನಿಕ ನೀರು ಸಂಗ್ರಹಣ ತೊಟ್ಟಿಗೆ ಗಪ್ಪಿ ಮೀನು ಬಿಡುವ ಮೂಲಕ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆರ್.ಸಿ.ಎಚ್.ಓ. ಡಾ.ಸುಜಾತಾ ಹಸವೀಮಠ, ಡಿಎಂಓ ಡಾ.ಮಂಜುನಾಥ ಎಸ್., ತಾಲೂಕ ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ, ಪಾಲಿಕೆ 1 ರ ಸಹಾಯಕ ಆಯುಕ್ತ ಆನಂದ ಕಾಂಬೆ ಸೇರಿದಂತೆ ಆರೋಗ್ಯ ಇಲಾಖೆ ವಿವಿಧ ಅಧಿಕಾರಿಗಳು ಹಾಗೂ ಕೆಲಗೇರಿ ಗ್ರಾಮದ ಪ್ರಮುಖರು, ಶ್ರೇಯಾ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಶ್ರೇಯಾ ಕಾಲೇಜು ವಿದ್ಯಾರ್ಥಿಗಳು ಕೆಲಗೇರಿ ಗ್ರಾಮದ ಮನೆಮನೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಲಾರ್ವಾ ನಾಶಗೊಳಿಸುವ ಕಾರ್ಯ ಮಾಡಿದರು.