ಎಂಪ್ರೆಸ್ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ನೀಡಲು ತೀರ್ಮಾನ
ತುಮಕೂರು, ಜು. ೬- ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಮಹತ್ವದ ಸೇವಾ ಕಾರ್ಯ ಮಾಡುತ್ತಿರುವ ಪಾವಗಡದ ಸ್ವಾಮಿ ಜಪಾನಂದಜೀ ನೇತೃತ್ವದ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಸ್ವಾತಂತ್ರ್ಯ ಪೂರ್ವದ ಎಂಪ್ರೆಸ್ ಬಾಲಕಿಯರ ಪ.ಪೂ ಕಾಲೇಜಿನ ಅರ್ಹ ವಿದ್ಯಾರ್ಥಿನಿಯರಿಗೂ ಊಟ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಅನ್ನಪೂರ್ಣೇಶ್ವರ ಆಹಾರ ಸಮಿತಿ ಮುಖ್ಯಸ್ಥರಾದ ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಅವರು ಈ ಸಂಬಂಧ ಕಾಲೇಜಿನಲ್ಲಿ ಆಹಾರ ಸಮಿತಿ ಸದಸ್ಯರು, ದಾನಿಗಳು, ಯೋಜನೆ ಪ್ರವರ್ತಕರು ಪ್ರಾಂಶುಪಾಲರು, ಅಧ್ಯಾಪಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಪಾನಂದಜೀ, ದೇಶದಲ್ಲೆ ಪ್ರಥಮವೆಂಬಂತೆ ತುಮಕೂರು ವಿಶ್ವವಿದ್ಯಾಲಯದಲ್ಲಿ ವರ್ಷದ ಹಿಂದೆ ಆರಂಭಿಸಿದ ಯೋಜನೆ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯ ಹಿರಿಯರಾದ ಎಸ್.ನಾಗಣ್ಣ, ನಟರಾಜಶೆಟ್ಟಿ, ರಮೇಶ್‌ಬಾಬು, ಕುಲಪತಿಗಳಾದ ಪ್ರೊ.ವೆಂಕಟೇಶ್ವರಲು ಮತ್ತಿತರ ಸದಸ್ಯರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವರ್ಗದವರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆ, ಹೊರ ಜಿಲ್ಲೆಯಿಂದ ಮುಂಜಾನೆಯೇ ಎದ್ದು, ಹಸಿದ ಹೊಟ್ಟೆಯಲ್ಲಿ ಕಾಲೇಜಿಗೆ ಬರುವ ಗ್ರಾಮೀಣ ಭಾಗದ ೧೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಯೋಜನೆ ಪ್ರಯೋಜನ ಪಡೆಯುತ್ತಿದ್ದು, ಒಂದು ಅಗಳನ್ನು ಹೊರ ಚೆಲ್ಲದೆ ಅನ್ನದ ಮಹತ್ವವನ್ನು ಅರಿತಿದ್ದಾರೆ. ತಾವೂ ತಿಂದ ತಟ್ಟೆ-ಲೋಟವನ್ನು ತಾವೇ ತೊಳೆದು ವ್ಯವಸ್ಥಿತವಾಗಿ ಜೋಡಿಸುವ ಮೂಲಕ ಜೀವನ ಶಿಸ್ತನ್ನು ಕಲಿತಿದ್ದಾರೆ. ಯೋಜನೆಯ ಯಶಸ್ಸು ಕಂಡು ಸರ್ಕಾರಿ ಜೂನಿಯರ್ ಕಾಲೇಜಿಗೂ ವಿಸ್ತರಿಸಬೇಕೆಂಬ ಕೋರಿಕೆ ಹಿನ್ನೆಲೆಯಲ್ಲಿ ಪರೀಕ್ಷಾ ಪೂರ್ವದಲ್ಲಿ ೩ ತಿಂಗಳು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದರು.
ಪ್ರಸಕ್ತ ಎಂಪ್ರೆಸ್ ಕಾಲೇಜಿನ ಹೆಣ್ಣು ಮಕ್ಕಳಿಗೂ ಯೋಜನೆ ವಿಸ್ತರಿಸಬೇಕೆಂದು ಕಲ್ಪಾಮೃತ ತಂಡದ ಟಿ.ಎನ್.ಮಧುಕರ್, ಉಮೇಶ್, ಕೆ.ಎಸ್.ಸಿದ್ಧಲಿಂಗಪ್ಪ, ಡಾ.ಬಿ.ಎನ್.ಪ್ರಶಾಂತ್, ಅಂಬಿಕಾ ಹುಲಿನಾಯ್ಕರ್, ರಕ್ಷಿತ್ ಮತ್ತಿತರರು ಮುಂದೆ ಬಂದಿದ್ದು, ಅನ್ನಪೂರ್ಣೇಶ್ವರಿ ಆಹಾರ ಸಮಿತಿ ಸದ್ಯಕ್ಕೆ ಕಾಲೇಜಿನ ೫೦೦ ಮಕ್ಕಳಿಗೆ ಒದಗಿಸಲು ಶಕ್ತವಾಗಿದೆ. ಯೋಜನೆ ಆರಂಭಿಸುವುದು ಮುಖ್ಯವಲ್ಲ, ಅದನ್ನು ನಿರಂತರ ಮುಂದುವರಿಸಿಕೊಂಡು ಹೋಗಲು ಪ್ರಾಂಶುಪಾಲರು, ಸಿಬ್ಬಂದಿಗಳ ಸಹಕಾರ ವ್ಯವಸ್ಥಿತ ನಿರ್ವಹಣೆಯ ಬದ್ಧತೆಯ ಭರವಸೆ ನಮಗೆ ಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮಲ್ಲಯ್ಯ ಮಾತನಾಡಿ, ಮಧ್ಯಾಹ್ನದ ಊಟದ ಯೋಜನೆ ಬಡ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದ್ದು, ಕಾಲೇಜಿನ ಕಡೆಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಜು.೧೦ ರಿಂದ ಸರ್ಕಾರಿ ಜೂನಿಯರ್ ಕಾಲೇಜಲ್ಲಿ ಮಧ್ಯಾಹ್ನದ ಊಟ ಪುನರಾರಂಭ
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಟ್ಟಂತೆ ಈ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಪುನರಾರಂಭಿಸಬೇಕೆಂಬ ಕಾಲೇಜಿನ ಪ್ರಾಂಶುಪಾಲ ರಾಜ್‌ಕುಮಾರ್ ಅಧ್ಯಾಪಕ ವೃಂದದವರ ಕೋರಿಕೆಗೆ ಸ್ವಾಮಿ ಜಪಾನಂದಜೀ, ಸಮಿತಿ ಸದಸ್ಯರಾದ ಎಸ್.ನಾಗಣ್ಣ, ನಟರಾಜಶೆಟ್ಟಿ ಇತರರು ಸಹಮತ ವ್ಯಕ್ತಪಡಿಸಿ, ಜು.೧೦ರಿಂದ ಕಾಲೇಜಿನಲ್ಲಿ ಅರ್ಹ ೫೦೦ ವಿದ್ಯಾರ್ಥಿಗಳಿಗೆ ಊಟ ವಿತರಣೆ ಆರಂಭಿಸಲು ದಿನಾಂಕ ನಿಗದಿಪಡಿಸಿದರು.
ಉಭಯ ಕಾಲೇಜುಗಳ ವತಿಯಿಂದಲೂ ಶ್ರೀಗಳು, ಆಹಾರ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ತತ್ವ ಫೌಂಡೇಶನ್‌ನ ಉಮೇಶ್ ಅವರು ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.
ಆಹಾರ ಸಮಿತಿ ಸದಸ್ಯ ಎಸ್.ನಾಗಣ್ಣ ಮಾತನಾಡಿ, ಪಾವಗಡದ ಸ್ವಾಮಿ ಜಪಾನಂದಜೀ ಅವರ ನೇತೃತ್ವದಲ್ಲಿ ವಿತರಿಸುತ್ತಿರುವ ಮಧ್ಯಾಹ್ನದ ಊಟದ ಯೋಜನೆ ಪೌಷ್ಠಿಕಾಂಶ ಕೊರತೆ ಎದುರಿಸುತ್ತಿದ್ದ ಮಕ್ಕಳ ಆರೋಗ್ಯ ವೃದ್ಧಿಗೆ ಪೂರಕವಾಗಿದ್ದು, ಬಹಳಷ್ಟು ಕಡೆ ಬೇಡಿಕೆ ಬರುತ್ತಿದೆ. ಸಂಪನ್ಮೂಲದ ಇತಿಮಿತಿಯಲ್ಲಿ ಅರ್ಹ ಗ್ರಾಮೀಣ, ದೂರದೂರಿನ ಮಕ್ಕಳಿಗೆ ಯೋಜನೆ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಸಮಾನ ಮನಸ್ಕ ಯುವ ತಂಡ ಕೈಜೋಡಿಸಿರುವುದರಿಂದ ಎಂಪ್ರೆಸ್ ಕಾಲೇಜಿನಲ್ಲಿ ಯೋಜನೆ ಫಲಪ್ರದವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.