ಕಾಡುಗೊಲ್ಲರಿಗೆ ಜಾತಿ ದೃಢೀಕರಣ ಪತ್ರ ನೀಡಲು ಆಗ್ರಹ
ತುಮಕೂರು, ಜು. ೬- ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಜನರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರು ಕಾಡುಗೊಲ್ಲ ಜಾತಿ ದೃಢೀಕರಣ ಪತ್ರ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ರಾಜ್ಯಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಕಾಡುಗೊಲ್ಲ ಯುವಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಸವಿತ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆಯ ರಾಜ್ಯಾಧ್ಯಕ್ಷ ಅರುಣ್‌ಕೃಷ್ಣಯ್ಯ, ಸರ್ಕಾರ ಕಾಡುಗೊಲ್ಲ ಸಮುದಾಯದ ಜನರಿಗೆ ಅವರ ದಾಖಲೆಗಳನ್ನು ಪರಿಶೀಲಿಸಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವಂತೆ ಹಲವಾರು ಸುತ್ತೋಲೆಗಳು ಮತ್ತು ಆದೇಶಗಳ ಮೂಲಕ ಸೂಚನೆ ನೀಡಿದ್ದರೂ ಇದುವರೆಗೂ ಸಮರ್ಪಕ ರೀತಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿಲ್ಲ. ೨೦೧೭ ಮತ್ತು ೨೦೧೮ರ ಆದೇಶ ಪತ್ರಗಳನ್ನೇ ಮುಂದಿಟ್ಟುಕೊಂಡು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸರ್ಟಿಪಿಕೇಟ್ ನಿರಾಕರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ೨೦೦೨ರಲ್ಲಿ ಹೊರಡಿಸಿರುವ ಆದೇಶ ಸಂಖ್ಯೆ: ಸಕಇ ೨೨೫ ಬಿಸಿಎ ೨೦೦೦ರಂತೆ ಕಾಡುಗೊಲ್ಲ ಜಾತಿಯನ್ನು ಪ್ರವರ್ಗ ಪಟ್ಟಿಯ ಒಂದರ ಕ್ರಮಸಂಖ್ಯೆ: ೮೬ (ಎಕ್ಸ್)ನಲ್ಲಿನ ಕಾಡುಗೊಲ್ಲ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ಆದೇಶಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ಮತ್ತೊಮ್ಮೆ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಆಯುಕ್ತರುಗಳಿಗೆ ಸಂಖ್ಯೆ: ಹಿಂಪಕ ೧೦೧ ಬಿಸಿಎ ೨೦೨೩ರ ಸುತ್ತೊಲೆಯನ್ನು ಸಹ ಹೊರಡಿಸಿದೆ. ಇಷ್ಟು ಆದೇಶಗಳಾದರು ಜಾತಿ ಪ್ರಮಾಣ ಪತ್ರವನ್ನು ವಿತರಿಸದೇ ಇರುವುದು ವಿಷಾಧನೀಯ ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚನೆಗೊಳಿಸಿದ್ದು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವಿಲ್ಲದೆ ಅಭಿವೃದ್ಧಿ ನಿಗಮದ ಯೋಜನೆಗಳನ್ನು, ಸಹಾಯ ಧನಗಳನ್ನು ಸಮುದಾಯದ ಜನತೆ ಪಡೆಯುವುದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ಕಾರವೇ ಅಧಿಕಾರಿಗಳು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕೇವಲ ಶಾಲಾ ದಾಖಲಾತಿಗೆ ಮಾತ್ರ ಜೋತು ಬೀಳದೆ, ಸ್ಥಳಿಯ ನಿವಾಸಿಗಳಿಂದ ದೃಢೀಕರಣ ಪಡೆದು, ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಆದರೆ ಈ ಕಾರ್ಯ ನಡೆಯುತ್ತಿಲ್ಲ. ಜಿಲ್ಲಾಧಿಕಾರಿಗಳು ಮುಂದಿನ ಒಂದು ತಿಂಗಳ ಒಳಗೆ ಜಿಲ್ಲೆಯ ಎಲ್ಲ ತಹಶೀಲ್ದಾರ್ ಮತ್ತು ಗ್ರಾಮ ಅಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಕ್ತ ತಿಳುವಳಿಕೆ ನೀಡಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಅರ್ಹರಿಗೆ ವಿತರಣೆಯಾಗುವಂತೆ ಮಾಡಬೇಕು. ಇಲ್ಲದಿದ್ದಲ್ಲಿ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸರ್ಕಾರ ಕಾಡುಗೊಲ್ಲರ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ, ಆ ಮೂಲಕ ಗಂಗಾ ಕಲ್ಯಾಣ, ಪ್ರವಾಸಿ ಟ್ಯಾಕ್ಸಿ, ಅರ್ಥಿಕ, ಶೈಕ್ಷಣಿಕ ಸವಲತ್ತುಗಳನ್ನು ನೀಡಲು ಹೊರಟಿದೆ.ಆದರೆ ಸರ್ಕಾರದ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಕಾಡುಗೊಲ್ಲ ಸಮುದಾಯದವರ ಬಳಿ ಜಾತಿ ಪ್ರಮಾಣ ಪತ್ರವೇ ಇಲ್ಲ. ಇದರಿಂದ ನಿಗಮ ರಚಿಸಿಯೂ ಯಾವುದೇ ಪ್ರಯೋಜನವಿಲ್ಲದಂತಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳಿಗೆ ಸೂಕ್ತ ನಿರ್ದೇಶನ ನೀಡಿ, ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆಯ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ರಮೇಶ್, ಪದಾಧಿಕಾರಿಗಳಾದ ಪ್ರಕಾಶ್, ಪವನ್, ಕುಮಾರ್, ಗುರುಶಾಂತ್, ಸುಚೇಂದ್ರ ಮತ್ತಿತರರು ಉಪಸ್ಥಿತರಿದ್ದರು.