ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಬಹುಮುಖ್ಯ
ಮಧುಗಿರಿ, ಜು.೬- ರಕ್ತದಾನ ಶ್ರೇಷ್ಟದಾನವಾಗಿದ್ದು, ಜೀವನ್ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ ಬದುಕು ನೀಡುವುದು ನಿಜಕ್ಕೂ ಉತ್ತಮವಾದ ಕೆಲಸ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಾಳಪ್ಪ ಎ.ಬಿ. ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಯುವರೆಡ್‌ಕ್ರಾಸ್ ಘಟಕ, ಐಕ್ಯೂಎಸಿ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜಿಲ್ಲಾ ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ತಾಲ್ಲೂಕು ರೋಟರಿ ಸಂಯುಕ್ತಾಶ್ರದಲ್ಲಿ ನಡೆದ ರಕ್ತಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ಅಧ್ಯಯನದ ಪ್ರಕಾರ ರಕ್ತಕಣಗಳಲ್ಲಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುವುದರಿಂದ ರಕ್ತದಾನದ ಮೂಲಕ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಟಿ.ಸ್ವಾಮಿ, ರಕ್ತದಾನದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ರಕ್ತದಾನ ಮಾಡುವುದರಿಂದ ದೌರ್ಬಲ್ಯ ಉಂಟಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ರಕ್ತದಾನ ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ತಾಲ್ಲೂಕು ರೋಟರಿ ಸಂಸ್ಥೆಯ ಶಿವಲಿಂಗಪ್ಪ ಮಾತನಾಡಿ, ನಾನಾ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ಏಳು ಮಂದಿಯಲ್ಲಿ ಒಬ್ಬರಿಗೆ ರಕ್ತದ ಅಗತ್ಯವಿರುತ್ತದೆ. ರಕ್ತದ ಕೊರತೆಯಿಂದಲೆ ಅನೇಕರು ಸಾವನ್ನಪ್ಪುತ್ತಿದ್ದು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಅವಶ್ಯಕತೆಯಿರುವ ಜನರ ನೆರವಿಗೆ ದಾವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ೩೮ ಜನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ೧೩೯ ವಿದ್ಯಾರ್ಥಿಗಳಿಗೆ ರಕ್ತಗುಂಪಿನ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರೊ. ಕುಮಾರ್ ಕೆ.ಎಸ್., ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ವೆಂಕಟರಮಣಪ್ಪ, ಕಿಶೋರ್, ಸಿದ್ಧಿಕ್, ಮಾರುತಿ ಬಿ.ಎಲ್., ರೋಟರಿ ಸಂಸ್ಥೆಯ ವೆಂಕಟೇಶ್, ವೆಂಕಟರಾಮು ಎಂ. ಭಾಗವಹಿಸಿದ್ದರು.