ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ
ಪಾವಗಡ, ಜು. ೬- ತಮ್ಮ ತಮ್ಮ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಬಳಸುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ ನೀರನ್ನು ಒದಗಿಸಬೇಕು ಎಂದು ಶಾಸಕ ಹೆಚ್.ವಿ. ವೆಂಕಟೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿಮ್ಮ ನಿಮ್ಮ ಪಂಚಾಯ್ತಿಗಳಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ನಾವಾಗಬೇಕು. ಪಿಡಿಒಗಳ ಮೇಲೆ ನನಗೆ ತುಂಬಾ ದೂರುಗಳು ಕೇಳಿ ಬರುತ್ತಿವೆ. ಕೆಲವು ಪಿಡಿಒಗಳು ಪಾವಗಡದ ಕೇಂದ್ರ ಸ್ಥಾನವನ್ನು ಬಿಡದೆ ತಮ್ಮ ಪಂಚಾಯ್ತಿಗಳತ್ತ ಗಮನಹರಿಸುತ್ತಿಲ್ಲ. ಜತೆಗೆ ಕಾಮಗಾರಿ ಮುಗಿಸಿರುವಂತಹ ಗುತ್ತಿಗೆದಾರರಿಗೆ ಬಿಲ್ ನೀಡದೆ ಸತಾಯಿಸುತ್ತಿದ್ದೀರಾ ಎಂಬ ಮಾಹಿತಿಯು ಸಹ ಲಭ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಒಂದು ತಾಲ್ಲೂಕು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್, ಸಹಾಯಕ ನಿರ್ದೇಶಕ ರಂಗನಾಥ್, ಜಿಲ್ಲಾ ಪಂಚಾಯ್ತಿ ಜೆಇ ಬಸವಲಿಂಗಪ್ಪ ಪಾಟೀಲ್ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.