ದೇಶದ ಅಭಿವೃದ್ಧಿಗೆ ಅಕ್ಷರ, ಆಧ್ಯಾತ್ಮ ಅಗತ್ಯ
ಮಧುಗಿರಿ, ಜು. ೬- ಆಧ್ಯಾತ್ಮ, ಅಕ್ಷರ, ಆರೋಗ್ಯ ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಜೀ ಹೇಳಿದರು.
ಪಟ್ಟಣದ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ದೂರ ತರಂಗ ಶಿಕ್ಷಣ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಪೋಷಕರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್, ಆಡಿಟರ್ ಆಗಬೇಕೆಂದು ಬಯಸುತ್ತಾರೆಯೇ ಹೊರತು ಮನುಷ್ಯರಾಗಬೇಕೆಂದು ಬಯಸುತ್ತಿಲ್ಲ. ಮಾನವೀಯ ಧರ್ಮ, ಮಾನವೀಯ ತತ್ವ ಮತ್ತು ಮಾನವತೆಯ ವಿಚಾರಗಳನ್ನು ಮನೆಗಳಲ್ಲಿ ಹೇಳಿಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ಯುವ ಜನರಿಗೆ ಸಿನಿಮಾ ನಟರು, ಕ್ರಿಕೆಟ್ ಆಟಗಾರರು ಆದರ್ಶವಾಗುತ್ತಿದ್ದಾರೆ. ಆದರೆ ಜೀವನದಲ್ಲಿ ಮನುಷ್ಯರಾಗಿ ಇರಲು ಅವಕಾಶ ಮಾಡಿಕೊಟ್ಟ ದೇಶಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರೆದ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಇವರುಗಳು ಆದರ್ಶವಾಗಬೇಕು ಎಂದರು.
ದೇಶ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸೈನಿಕರು ಹಾಗೂ ರೈತರಿಗೆ ಧನ್ಯವಾದ ಹೇಳಬೇಕೆಂಬ ಜಾಗೃತಿ ಎಲ್ಲಿವರೆಗೆ ಮೂಡುವುದಿಲ್ಲವೋ ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದರು. ಈ ಶಾಲೆಯಲ್ಲಿ ಅಪರಂಜಿ ಅಂತಹ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಭವಿಷ್ಯ ಭಾರತವನ್ನು ಮುನ್ನಡೆಸುವ ಶಕ್ತಿಯನ್ನು ಆಡಳಿತ ಮಂಡಳಿಯವರು ಕೊಡಬೇಕು ಎಂದ ಅವರು, ಪ್ರತಿ ವಿದ್ಯಾರ್ಥಿಯು ಈ ದೇಶದ ಸಂಸ್ಕೃತಿಯ ಸಾಕಾರರೂಪವಾಗಬೇಕು. ಉನ್ನತ ಹುದ್ದೆ ಅಲಂಕರಿಸಿದರೂ ಕಲಿತ ಶಾಲೆಯ ಹೆಸರನ್ನು ಮರೆಯಬಾರದು ಎಂದರು.
ಈ ವಿದ್ಯಾಸಂಸ್ಥೆ ಬೃಹತ್ತಾಗಿ ವಿಸ್ತಾರಗೊಳ್ಳಲು ಅಗತ್ಯ ಇರುವ ಸಹಕಾರ ನೀಡಿ ಭೂಮಿಯನ್ನು ಮಂಜೂರು ಮಾಡಿಸುವಂತೆ ಸಹಕಾರ ಸಚಿವ ಕೆ. ಎನ್. ರಾಜಣ್ಣನವರಿಗೆ ಮನವಿ ಮಾಡುವುದಾಗಿ ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲ ಸಚಿವರಾದ ನಾಹಿದ ಜಂ ಜಂ ಮಾತನಾಡಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಿರುವ ಶಾಲಾ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯವಾದದು, ವಿದ್ಯಾರ್ಥಿಗಳು ಪೋಷಕರ ಕನಸು ನನಸುಗೊಳಿಸಿ, ಶಿಕ್ಷಕರಿಂದ ಹಾಗೂ ಆಡಳಿತ ಮಂಡಳಿಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಎಸ್. ಶಂಕರನಾರಾಯಣ್, ಬಿಇಓ ಕೆ. ಎನ್. ಹನುಮಂತರಾಯಪ್ಪ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪುರಸಭಾ ಸದಸ್ಯೆ ಸುಜಾತ ಶಂಕರ್ ನಾರಾಯಣ್, ವಿದ್ಯಾ ಸಂಸ್ಥೆಯ ಖಜಾಂಚಿ ಡಿ. ಜಿ. ಶಂಕರನಾರಾಯಣ ಶ್ರೇಷ್ಠಿ, ನಿರ್ದೇಶಕರಾದ ಡಿ.ಎಸ್. ನಟರಾಜ್, ಎಂ.ಎಸ್. ಸಂದೀಪ್ ನಾರಾಯಣ್, ಮುಖ್ಯ ಶಿಕ್ಷಕರಾದ ಚೇತನ ಕುಮಾರಿ, ನಾಗರಾಜು, ಸೇವಾಶ್ರಮದ ಸಂಯೋಜಕ ಎಚ್. ಆರ್. ಶಶಿಕುಮಾರ್ ಪಾಲ್ಗೊಂಡಿದ್ದರು.