ಯುವ ಪೀಳಿಗೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿಯ ಅರಿವು ಅಗತ್ಯ
ಕೊರಟಗೆರೆ, ಜು. ೬- ಯುವ ಜನತೆ ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯದ ಉಡುಗೆ ತೊಡುಗೆಗಳನ್ನು ತೊಟ್ಟು ಸಂಭ್ರಮಿಸಿ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಿ.ಎನ್. ಈರಪ್ಪನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ವೇದಿಕೆ ಹಾಗೂ ಐಕ್ಯುಎಸಿ ಅಡಿಯಲ್ಲಿ ಪಾರಂಪರಿಕ ದಿನ, ಆಹಾರ ಮೇಳ, ಕಾಲೇಜಿನಲ್ಲಿಯೂ ಯುಟ್ಯೋಬ್ ಚಾನೆಲ್ ಅನಾವರಣ ಹಾಗೂ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ರೇಖಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ವೈವಿಧ್ಯತೆಯ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದ್ದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆ ಮತ್ತು ವೈವಿಧ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಾಡಿನ ಐತಿಹಾಸಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯೊಂದಿಗೆ ಜನತೆ ಭಾವನಾತ್ಮಕ ಸಂಬಂಧ ಹೊಂದಿರುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ತಿಳಿಸಬೇಕು ಎಂದರು.
ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿದ ಸುವರ್ಣಮುಖಿ ಯೂಟ್ಯೂಬ್ ಚಾನೆಲ್‌ನ ಅಭಿವೃದ್ಧಿ ಸಮತಿ ಸದಸ್ಯ, ನಿವೃತ್ತ ಶಿಕ್ಷಕ ಹಾಗೂ ಪತ್ರಕರ್ತ ಎನ್. ಪದ್ಮನಾಭ್ ಲೋಕಾರ್ಪಣೆಗೊಳಿಸಿದರು. ವಿದ್ಯಾರ್ಥಿಗಳೇ ತಯಾರಿಸಿ ಪ್ರದರ್ಶಿಸಿದ ಆಹಾರ ಮೇಳಕ್ಕೆ ನಿವೃತ್ತ ಶಿಕ್ಷಕ ಹೆಚ್.ಎಲ್.ನಾರಾಯಣ್ ಚಾಲನೆ ನೀಡಿದರು.
ಪಾರಂಪರಿಕ ದಿನ ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಸಿಡಿಸಿ ಸದಸ್ಯ, ವಾಣಿಜ್ಯೋದ್ಯಮಿ ಬಾಲಾಜಿ ದರ್ಶನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಗೋಲ್ಡನ್ ದಿನಗಳಾಗಿ ಸಂಭ್ರಮಿಸಿ ಉತ್ತಮ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ತಮ್ಮೆದೇ ಆದ ಕೊಡುಗೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಈರಪ್ಪನಾಯಕ್ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ರೇಖಾ ಚಿತ್ರಗಳ ಪ್ರದರ್ಶನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ವೃತ್ತ ಶಿಕ್ಷಕ ಡಿ.ರಂಗಶ್ಯಾಮಯ್ಯ, ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಡಾ.ಡಿ.ಎಸ್.ದೀಪಾ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶಿವರಾಮಯ್ಯ, ಸದಸ್ಯರಾದ ಡಾ.ಸಿದ್ದಗಂಗಯ್ಯ, ಡಾ. ಕೆ.ಎಸ್.ಚೈತಾಲಿ, ಎಂ.ಎನ್,ಪೂಜಾ, ಲೋಹಿತ್‌ರಾಮ್, ನಟರಾಜು, ಡಾ.ಗಿರಿಜಾ, ಲೋಕೇಶ್‌ನಾಯಕ್, ಡಾ.ಲಕ್ಷ್ಮೀಪತಯ್ಯ, ಖಾದರ್ ಪಾಷಾ ಖಾದ್ರಿ, ಡಾ.ಅಮಿತಾ, ಡಾ.ತಿಪ್ಪೇಸ್ವಾಮಿ, ಡಾ.ಶಿವಪ್ಪ, ರಂಗನಾಥ ಮೂರ್ತಿ, ಮುನಿರಾಜು, ಸರಳ, ಚಂದ್ರಶೇಖರ್, ಜಯರಾಮ್‌ರೆಡ್ಡಿ, ಗಂಗಮ್ಮ, ಜ್ಞಾನವಾಣಿ, ದಿವಾಕರ್, ಯಶೋಧ ಮತ್ತಿತರರು ಉಪಸ್ಥಿತರಿದ್ದರು.