ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಮನವಿ
ತುಮಕೂರು, ಜು. ೬- ನಗರದ ೨ನೇ ವಾರ್ಡಿನ ಸಿರಾ ಗೇಟ್‌ನ ವೆಂಕಟೇಶಪುರದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ವೆಂಕಟೇಶಪುರದ ನಾಗರಿಕ ಮುಖಂಡರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಮೊದಲು ವೆಂಕಟೇಶಪುರದಲ್ಲಿದ್ದ ಮದ್ಯದಂಗಡಿಯನ್ನು ನಾಗರಿಕರ ಒತ್ತಾಯದ ಮೇರೆಗೆ ಸ್ಥಳಾಂತರಿಸಲಾಗಿದೆ. ಈಗ ಮತ್ತೆ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಎನ್.ವೆಂಕಟೇಶಾಚಾರ್ ಮಾತನಾಡಿ, ಜನವಸತಿ ಪ್ರದೇಶವಾದ ವೆಂಕಟೇಶಪುರದಲ್ಲಿ ಈ ಮೊದಲು ಮದ್ಯದಂಗಡಿ ಇತ್ತು. ಮದ್ಯ ಸೇವನೆಗೆಂದು ಇಲ್ಲಿಗೆ ಬರುತ್ತಿದ್ದ ಕುಡುಕರ ಉಪಟಳಗಳಿಂದ ನಾಗರಿಕರು ರೋಸಿಹೋಗಿದ್ದರು. ಮದ್ಯದಂಗಡಿಗೆ ಬಂದವರು ಇಲ್ಲಿನ ಖಾಲಿ ನಿವೇಶನಗಳಲ್ಲಿ ಕುಳಿತು ಮದ್ಯ ಸೇವನೆ, ಮಾದಕ ಪದಾರ್ಥಗಳ ಸೇವನೆ ಮಾಡುತ್ತಾ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಗೆ ನಿತ್ಯ ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದರು ಎಂದರು.
ಮದ್ಯ ಸೇವನೆ, ಮಾದಕ ವ್ಯಸನಿಗಳ ಅಡ್ಡೆಯಾಗಿದ್ದ ಈ ಪ್ರದೇಶದಲ್ಲಿ ಅಪರಾಧ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ಇಲ್ಲಿದ್ದ ಮದ್ಯದಂಗಡಿಯನ್ನು ಸ್ಥಳಾಂತರ ಮಾಡಿದ ಮೇಲೆ ಶಾಂತಿ ನೆಲೆಸಿದೆ. ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು. ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ವೇಂಕಟೇಶಾಚಾರ್ ಮನವಿ ಮಾಡಿದರು.
ಬಿಜೆಪಿ ಮುಖಂಡ ಗೋಕುಲ್ ಮಂಜುನಾಥ್ ಮಾತನಾಡಿ, ವೆಂಕಟೇಶಪುರ ಸಮೀಪದಲ್ಲಿ ಎಪಿಎಂಸಿ ಮಾರುಕಟ್ಟೆ, ದೇವಸ್ಥಾನಗಳಿವೆ. ಇಲ್ಲಿಗೆ ಬರುವ ಸಾರ್ವಜನಿಕರು ಕುಡುಕರ ಗಲಾಟೆ, ಅತಿರೇಕದ ವರ್ತನೆಗಳು ಕಿರಿಕಿರಿ ಅನುಭವಿಸುತ್ತಿದ್ದರು. ಮಕ್ಕಳು, ಹೆಣ್ಣು ಮಕ್ಕಳು ಓಡಾಡಲು ಭಯಪಡುವ ಪರಿಸ್ಥಿತಿ ಇತ್ತು. ಅಪರಾಧ ಕೃತ್ಯಗಳೂ ಹೆಚ್ಚಾಗಿದ್ದವು. ಇದೇ ಕಾರಣಕ್ಕೆ ಮದ್ಯದಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಾಗರೀಕರು ಮನವಿ ಮಾಡಿದ್ದರ ಫಲವಾಗಿ ಅಂಗಡಿಯನ್ನು ಎತ್ತಂಗಡಿ ಮಾಡಲಾಗಿತ್ತು ಎಂದು ಹೇಳಿದರು.
ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ನಾಗರೀಕರು, ಶಾಂತಿ, ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನನಿ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಕೊಪ್ಪಳ್ ನಾಗರಾಜು, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ರಾಘವೇಂದ್ರ, ರಫಿಕ್‌ಅಹ್ಮದ್, ದತ್ತಾತ್ರೇಯ, ಇಮ್ರಾನ್‌ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.