ಮುಡಾ ಹಗರಣ ಸಿಬಿಐ ತನಿಖೆಯಾಗಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.06:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಮುಡಾ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರುವ ಹಗರಣ ಸಾವಿರಾರು ಕೋಟಿ ರೂ.ಗಳ ಬಹುಕೋಟಿ ಹಗರಣವಾಗಿದ್ದು, ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಸಿದ್ದರಾಮಯ್ಯ ಅವರ ಶಿಷ್ಯರು ಸಲಹೆ ಕೊಡುತ್ತಿದ್ದಾರೆ. ಆದರೆ, ಈ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕಿದ್ದು, ಇದಕ್ಕಾಗಿ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸುತ್ತೇವೆ ಎಂದು ಹೇಳಿದರು.
ಸರ್ಕಾರಕ್ಕೆ ವಾಪಸ್ ನೀಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಿಂದ ತಮಗೆ ಬಂದಿರುವ ಜಾಗವನ್ನು ಸರ್ಕಾರಕ್ಕೆ ವಾಪಸ್ ಕೊಡಬೇಕಿದೆ. ಸಿದ್ದರಾಮಯ್ಯ ಅವರು ತಮಗೆ ಸಿಕ್ಕಿರುವ ಜಾಗದಲ್ಲಿ ಒಂದು ಆಸ್ಪತ್ರೆ ನಿರ್ಮಿಸಿದ್ದರೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಇಲ್ಲವಾದಲ್ಲಿ ನಿಮ್ಮ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದ ಅವರು, ಮುಡಾ ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಏಕೆ ಮಾನ ಮರ್ಯಾದೆಯನ್ನು ಹಾದಿ ಬೀದಿಯಲ್ಲಿ ಕಳೆದುಕೊಳ್ಳುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಜನರಿಗೆ ಸೈಟ್ ಕೊಟ್ಟಿದ್ದೀರಾ: ಮುಡಾದಿಂದಲೇ ತಮಗೆ 62 ಕೋಟಿ ರೂ. ಬರಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿಎಂ ಅವರ ಈ ಹೇಳಿಕೆ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಯಾವ ರೀತಿಯ ಲೆಕ್ಕಚಾರ? ಹಣಕಾಸು ಸಚಿವರಾದವರೇ ಹೀಗೆ ಮಾತಾನಾಡಿದರೆ ಹೇಗೆ? ಸಿದ್ದರಾಮಯ್ಯ ಏಕೆ ಮಣ್ಣಿನ ಹಿಂದೆ ಹೋಗುತ್ತಿದ್ದಾರೆ? ಸಮಾಜವಾದಿ ಮನಸ್ಸಿನ ಸಿದ್ದರಾಮಯ್ಯ ಮಣ್ಣಿನ ಹಿಂದೆ ಹೋಗುವ ರೀತಿಯಲ್ಲಿ ಏಕೆ ಬದಲಾದರು?. ನಿಮ್ಮ ಜಾಗಕ್ಕೆ 6 ಕೋಟಿ ರೂ. ಆಗಬಹುದು. ಆದರೆ 62 ಕೋಟಿ ಏಕೆ ಕೇಳುತ್ತಿದ್ದೀರಿ? ಇದರಿಂದ ನಿಮ್ಮ ಘನತೆ ಕುಸಿಯುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಒಂದು ಸೈಟ್ ಕೂಡ ಸಾಮಾನ್ಯ ಜನರಿಗೆ ಕೊಡಿಸಿಲ್ಲ. ಅಲ್ಲದೇ ಸಿದ್ದರಾಮಯ್ಯ ಅವರ ಪತ್ನಿ ಖರೀದಿಸಿರುವ ದೇವನೂರು ಬಡಾವಣೆ ಜಾಗ ದಲಿತರಿಗೆ ಸೇರಿದ್ದಾಗಿದ್ದು, ಜವರ ಎಂಬ ವ್ಯಕ್ತಿಗೆ ಸೇರಿದ ಜಮೀನಾಗಿದೆ. ಡಿನೋಟಿನೋಫೈ ಆದ ಜಾಗವನ್ನು ಸಿಎಂ ಅವರ ಪತ್ನಿಯ ಅಣ್ಣ ಖರೀದಿ ಮಾಡಿದ್ದು, 2010ರಲ್ಲಿ ದಾನ ಪತ್ರವಾಗಿ ಸಿಎಂ ಪತ್ನಿ ಹೆಸರಿಗೆ ಬಂದಿದೆ ಎಂದರು.
ರಿಯಲ್ ಎಸ್ಟೇಟ್ ಗಿರಾಕಿ:
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿಯಾಗಿದ್ದು, ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಬಂದು ಪೆÇಲೀಸ್ ಭದ್ರತೆಯಲ್ಲಿ ಸಭೆ ಮಾಡಿ ಹೋಗುತ್ತಾರೆ. ಆತ ದಡ್ಡನೋ ಅಥವಾ ಬುದ್ದಿವಂತನೋ? ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ನಾನು ಏಳು ಸೈಟ್ ಕೇಳಿದ್ದೇನೆ ಅಂತೀಯಲ್ಲ. ನಾನು ಪ್ರಾಮಾಣಿಕ ಅಂತಾ ವಿಧಾನಸೌಧದ ಒಳಗೇ ಹೇಳಿದ್ದೀನಿ. ಚೇಂಜ್ ಆಫ್ ಲ್ಯಾಂಡ್‍ಗೆ 5 ಲಕ್ಷ ಫಿಕ್ಸ್ ಮಾಡಿದ್ದಾನೆ ಎಂದು ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿಕಾರಿದರು.